ಗಂಗಾವತಿ (ಕೊಪ್ಪಳ): ನಗರದ ಜನವಸತಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆ ಪೊಲೀಸರು ದಾಳಿ ಮಾಡಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆದು, ಇಬ್ಬರು ಯುವತಿಯರ ರಕ್ಷಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಜಯಪುರ ಮೂಲದ ಬಸವರಾಜ್ ವಕ್ಕಲಿಗ, ರಾಯಚೂರು ಜಿಲ್ಲೆಯ ಮಸ್ಕಿಯ ಖಾಸಗಿ ವಾಹನ ಚಾಲಕ ಬಸವರಾಜ ಹಾಗೂ ಖಾಸಗಿ ಕಂಪನಿಯ ಸೇಲ್ಸ್ಮನ್ ಸುರೇಶ್ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಸೊಲ್ಲಾಪುರ ಮೂಲದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹೊಸಳ್ಳಿ ರಸ್ತೆಯಲ್ಲಿರುವ ಎಲ್ವಿಟಿ ಕಾಲೋನಿಯಲ್ಲಿನ ಮನೆಯೊಂದನ್ನು ಕಳೆದ ತಿಂಗಳು ಈ ಆರೋಪಿಗಳು ಬಾಡಿಗೆ ಪಡೆದುಕೊಂಡಿದ್ದರು.
ಬಳಿಕ ವೇಶ್ಯಾವಾಟಿಕೆ ದಂಧೆ ಶುರುಮಾಡಿದ್ದರು ಎನ್ನಲಾಗಿದೆ. ನೆರೆಹೊರೆಯ ನಿವಾಸಿಗಳ ದೂರಿನ ಮೆರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಹಾಗೂ ನಗರಠಾಣೆಯ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ: ನಗರಸಭಾ ಸದಸ್ಯ ಸೇರಿ ಇಬ್ಬರ ಬಂಧನ