ಗಂಗಾವತಿ(ಕೊಪ್ಪಳ): ಬದಲಾದ ಹೊಸ ಗೈಡ್ಲೈನ್ ಪ್ರಕಾರ ಹೈ-ರಿಸ್ಕ್ ರಾಜ್ಯಗಳು ಎಂದು ಗುರುತಿಸಲಾದ ರಾಜ್ಯಗಳಿಂದ ಬಂದವರನ್ನು ಮಾತ್ರ ಇನ್ಮುಂದೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಚಕೋಟಿ ಶರಣಪ್ಪ ಹೇಳಿದ್ದಾರೆ.
ಒಟ್ಟು 8 ರಾಜ್ಯಗಳನ್ನು ಹೈ-ರಿಸ್ಕ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕೇರಳ, ದೆಹಲಿ ಮತ್ತು ರಾಜಸ್ಥಾನ ರಾಜ್ಯಗಳು ಈ ಪಟ್ಟಿಯಲ್ಲಿ ಸೇರಿವೆ. ಈ ರಾಜ್ಯದಿಂದ ಬಂದವರನ್ನು ಮಾತ್ರ 7 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. 5 ಅಥವಾ 7 ನೇ ದಿನಕ್ಕೆ ಸ್ಯ್ವಾಬ್ ಟೆಸ್ಟ್ ಮಾಡಿ ಯಾವುದೇ ಸಮಸ್ಯೆ ಕಾಣದಿದ್ದಲ್ಲಿ ಮನೆಗೆ ಕಳಿಸಲಾಗುವುದು.
ಈ ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಿಂದ ಬಂದವರು ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಮೊದಲಾದ ರಾಜ್ಯದಿಂದ ಗಂಗಾವತಿಗೆ ಆಗಮಿಸಿದ್ದ 886 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. 14 ದಿನಗಳ ಕ್ವಾರಂಟೈನ್ ಬಳಿಕ 800 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.