ಕುಷ್ಟಗಿ (ಕೊಪ್ಪಳ): ಅಗತ್ಯ ವಸ್ತುಗಳ ಕೊಳ್ಳಲು ಇಂದು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಿದ ಕಾರಣ ಜನರು ಸಾಮಾಜಿಕ ಅಂತರ ಮರೆತು ಮುಗಿಬಿದ್ದು ಖರೀದಿಸಿದರು.
ಮೇ 24 ರಿಂದ 30ರವರೆಗೆ ಕಠಿಣ ಲಾಕಡೌನ್ ಜಾರಿಗೊಳಿಸಿದ ಬೆನ್ನಲ್ಲೇ ನಗರದಲ್ಲಿ ಇಂದು ಜನಜಂಗುಳಿ ಕಂಡು ಬಂದಿದೆ. ತಾಲೂಕು ಕ್ರೀಡಾಂಗಣದಲ್ಲಿ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಜನರು ತರಾತುರಿಯಲ್ಲಿ ಖರೀದಿಸಿದರು.
ಐದು ದಿನಗಳ ಕಠಿಣ ಲಾಕ್‌ಡೌನ್ ನಂತರ ಶನಿವಾರ, ಭಾನುವಾರ ಸಡಿಲಿಕೆಗೆ ಬಗ್ಗೆ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐದು ದಿನಗಳ ಕಠಿಣ ಲಾಕಡೌನ್ ಶ್ರಮ ಎರಡು ದಿನಗಳ ಸಡಿಲಿಕೆಯಿಂದ ವ್ಯರ್ಥವಾಗಿದೆ. ಸರ್ಕಾರ ಲಾಕ್‌ಡೌನ್ ಮಾಡಿದರೂ ಪ್ರಯೋಜನೆ ಇಲ್ಲದಂತಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ವಾರದಲ್ಲಿ ಒಂದು ದಿನ ಇಡೀ ದಿನ ಸಡಿಲಿಕೆ ಅವಕಾಶ ನೀಡಿದ್ದಲ್ಲಿ ಜನ ಜಂಗುಳಿ ಆಗುತ್ತಿರಲಿಲ್ಲ. ಕೆಲವೇ ತಾಸುಗಳ ಸೀಮಿತ ಸಡಿಲಿಕೆಯಿಂದ ಲಾಕ್‌ಡೌನ್ ವ್ಯರ್ಥ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮದ್ಯಕ್ಕಾಗಿ ಮುಗಿಬಿದ್ದ ಜನತೆ:
ಮೇ 24 ರಿಂದ 30 ರವೆರೆಗೆ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯಕ್ಕಾಗಿ ಜನರು ಬೆಳಗ್ಗೆಯಿಂದಲೇ ಮುಗಿಬಿದ್ದಿದ್ದಾರೆ. ಮಹಿಳೆಯೊಬ್ಬಳು ಸಹ ಮದ್ಯ ಖರೀದಿಸಲು ಕ್ಯೂ ನಿಂತಿರುವುದು ಕಂಡು ಬಂದಿದೆ. ನಗರದ ಗಂಜ್ ಸರ್ಕಲ್ ಬಳಿಯ ಮದ್ಯದಂಗಡಿ ಸೇರಿದಂತೆ ನಗರದ ವಿವಿಧ ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯರು ಮದ್ಯ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ.
ಹಣ್ಣು ತರಕಾರಿಗಳನ್ನು ಮನೆ ಮನೆಗೆ ತಲುಪಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದರೂ ಸಹ ಜನರು ಮಾರ್ಕೆಟ್ಗೆ ಬಂದು ಖರೀದಿಸುತ್ತಿದ್ದಾರೆ. ಒಂದೇ ಕಡೆ ನಿಂತುಕೊಂಡು ವ್ಯಾಪಾರ ಮಾಡಬೇಡಿ ಎಂದ ಪೊಲೀಸರು ಹೇಳಿದರೂ ಕೇಳದ ವ್ಯಾಪಾರಿಗಳನ್ನು ಚದುರಿಸಿದರು. ಓಣಿಗಳಿಗೆ ತೆರಳಿ ಹಣ್ಣು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸರು ತಾಕೀತು ಮಾಡಿದರು.