ಗಂಗಾವತಿ(ಕೊಪ್ಪಳ): ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ತಾಲೂಕಿನ ಗಂಗಾವತಿ-ಕಂಪ್ಲಿ ಸಂಪರ್ಕ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಡಲಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಕ್ಕಜಂತಕಲ್ ಬಳಿ ಇರುವ ಗಂಗಾವತಿ-ಕಂಪ್ಲಿ ಸೇತುವೆಯು ಮುಳುಗಡೆ ಹಂತದಲ್ಲಿರುವುದರಿಂದ ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಶಿಫಾರಸಿನ ಮೇರೆಗೆ ಮುಂದಿನ ಆದೇಶದವರೆಗೂ ವಾಹನ ಮತ್ತು ಜನ ಸಂಚಾರ ನಿಷೇಧಿಸಲಾಗಿದೆ.
ಜಲಾಶಯದಿಂದ ಸದ್ಯ 82 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 90ರಿಂದ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಲ್ಲಿ ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ಇದರಿಂದ ಬಳ್ಳಾರಿ-ಕೊಪ್ಪಳ ಜಿಲ್ಲೆಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತವಾಗಿದೆ. ಕೇವಲ 10 ಕಿ.ಮೀ. ಇರುವ ಕಂಪ್ಲಿ-ಗಂಗಾವತಿ ಮಧ್ಯದ ರಸ್ತೆ ಪ್ರಯಾಣಕ್ಕೆ ಜನರು 27 ಕಿ.ಮೀ. ಸುತ್ತು ಬಳಸಿ ಗಂಗಾವತಿಗೆ ಬರಬೇಕಾದ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಮುರಿದ ಮರದ ಸೇತುವೆ ಮೇಲೆ ನಿಂತು ಮೂಕರೋದನೆ.. ಕೊನೆಗೂ ಮನೆ ಸೇರಿತು ಶ್ವಾನ