ಕೊಪ್ಪಳ : ಜಿಲ್ಲೆಯ ಈಚನಾಳ ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಘಟನೆ ನಡೆದಿದೆ.
ನಿನ್ನೆ ಗ್ರಾಮದ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಗಂಗಾಧರ ಎಂಬುವವರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು, ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕರೆಯುವಾಗ ಶಿಕ್ಷಣ ಪ್ರೇಮಿ ಎಂದು ಕಾರ್ಯಕ್ರಮ ಆಯೋಜಕರು ಗಂಗಾಧರ್ ಅವರನ್ನು ಕರೆದಿದ್ದಾರೆ. ಹೀಗೆ ಕರೆದಿರುವುದಕ್ಕೆ ಒಂದು ಸಮುದಾಯದ ಜನ ಆಕ್ಷೇಪ ವ್ಯಕ್ತಪಡಿಸಿ, ಸ್ವಲ್ಪ ಗಲಾಟೆ ಕೂಡ ನಡೆಸಿದ್ದರು ಎನ್ನಲಾಗಿದೆ.
ಕಾರ್ಯಕ್ರಮ ಮುಗಿದ ಬಳಿಕ ಜನರು, ಗಂಗಾಧರ ಅವರ ಮನೆಗೆ ಹೋಗಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಥಳಿತಕ್ಕೊಳಗಾದ ಗಂಗಾಧರ್ ಆಸ್ಪತ್ರೆಗೆ ತೆರಳಿ, ನಂತರ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ಕನಕಗಿರಿ ಠಾಣೆಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ದೂರು ನೀಡಲು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಸಹ ಶಾಲಾ ಉಡುಪಿನಲ್ಲಿಯೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.