ಕೊಪ್ಪಳ: ಕೊರೊನಾದಿಂದಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಲಘು ಸಂಗೀತ, ಸಾಂಸ್ಕೃತಿಕ ಕಲಾವಿದರು ಹಾಗೂ ವಾದ್ಯಗೋಷ್ಠಿ ಕಲಾವಿದರಿಗೂ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಲಘು ಸಂಗೀತ, ಸಾಂಸ್ಕೃತಿಕ ಕಲಾವಿದರ ಸಂಘ ಆಗ್ರಹಿಸಿದೆ.
ಈ ಕುರಿತಂತೆ ಸಂಘದ ಜಿಲ್ಲಾಧ್ಯಕ್ಷ ಬಾಷಾ ಹಿರೇಮನಿ ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕಲಾವಿದರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು. ಕೊರೊನಾ ಸೋಂಕಿನಿಂದಾಗಿ ಎಲ್ಲಾ ವರ್ಗದ ಜನರ ಬದುಕು ಅತ್ಯಂತ ಕಷ್ಟದಲ್ಲಿದೆ. ಅದರಂತೆ ಕಲಾವಿದರ ಬದುಕು ಸಹ ಅತ್ಯಂತ ಶೋಚನೀಯವಾಗಿದೆ. ಕೂಲಿಕಾರರು ಸೇರಿದಂತೆ ಸರ್ಕಾರ ಕೆಲ ವರ್ಗಗಳಿಗೆ ಪರಿಹಾರ ಧನ ನೀಡಿದೆ. ಅದರಂತೆ ನಮ್ಮ ಎಲ್ಲಾ ಕಲಾವಿದರಿಗೂ ಆರ್ಥಿಕ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಈಗ ನಮಗೆ ಕಾರ್ಯಕ್ರಮಗಳನ್ನು ಮಾಡಲು ಅನುಮತಿ ನೀಡುತ್ತಿಲ್ಲ. ಆದರೆ ರಾಜಕೀಯದ ಕಾರ್ಯಕ್ರಮಗಳು ನಿರಂತರವಾಗಿ ನಡೆದೇ ಇವೆ. ಅಲ್ಲಿ ನೂರಾರು ಜನರು ಸೇರಿರುತ್ತಾರೆ. ಆದರೆ ನಮಗೆ ಯಾಕೆ ಅನುಮತಿ ನೀಡುತ್ತಿಲ್ಲ. ನಮ್ಮ ಕಲಾವಿದರ ಬದುಕು ದುಸ್ತರವಾಗಿದ್ದು, ಪರಿಶೀಲಿಸಿ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು. ಕಲಾವಿದರಿಗೆ ಆಶ್ರಯ ಮನೆ, ಆರ್ಥಿಕ ನೆರವು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಮೂಲಕ ಕಲಾವಿದರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.