ಕುಷ್ಟಗಿ(ಕೊಪ್ಪಳ): ಕೊರೊನಾ ಪಾಸಿಟಿವ್ನಿಂದ ಗುಣಮುಖರಾದವರಿಗೆ ಆರೋಗ್ಯ ಇಲಾಖೆಯಿಂದ ನೆಗೆಟಿವ್ ದೃಢೀಕೃತ ಸರ್ಟಿಫಿಕೇಟ್ ಕೊಡಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಯಲಬುರ್ಗಾ ತಾಲೂಕಿನ ಕೋವಿಡ್ ಸೆಂಟರ್ಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ಹಾಗೂ ಅಹವಾಲು ಆಲಿಸಿದರು. ಕೊರೊನಾ ಪಾಸಿಟಿವ್ನಿಂದ ಗುಣಮುಖರಾದವರಿಗೆ ಜನ ಅನುಮಾನದಿಂದ ಕಾಣುತ್ತಿದ್ದು, ಮಾತನಾಡಿಸಲು ಹಿಂಜರಿಯುತ್ತಿರುವ ಬಗ್ಗೆ ರೋಗಿಗಳ ವಿಷಯ ಪ್ರಸ್ತಾಪಕ್ಕೆ ಈ ಭರವಸೆ ನೀಡಿದರು. ತಳಕಲ್ ಕೋವಿಡ್ ಸೆಂಟರ್ನಿಂದ ಅವ್ಯವಸ್ಥೆಯ ದೂರುಗಳು ಬರದಂತೆ ಎಚ್ಚರವಹಿಸಿ ಎಂದ ಅವರು, ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಶುಚಿತ್ವ, ರುಚಿ ಊಟ, ಶೌಚಾಲಯ ಸ್ವಚ್ಛತೆ, ವಿದ್ಯುತ್ ದೀಪಗಳ ಬಗ್ಗೆಯೂ ಗಮನ ಹರಿಸಿ ಎಂದರು.
ಪಾಸಿಟಿವ್ ರೋಗಿಗಳು ಮೊದಲೇ ಖಿನ್ನತೆಗೆ ಒಳಗಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಖಿನ್ನತೆ ಹೋಗಲಾಡಿಸಬೇಕು. ಈ ವೈರಸ್ ವಿಶ್ವವನ್ನೇ ಬಾಧಿಸಿದ್ದು, ಎದುರಿಸುವುದು ಅನಿವಾರ್ಯ ಎನಿಸಿದೆ ಎಂದರು.