ಕೊಪ್ಪಳ: ಸಿ.ಪಿ. ಯೋಗೇಶ್ವರ್ ಏನ್ ಸೀನಿಯರ್ ಲೀಡರ್ ಅಲ್ಲ, ಸುಮ್ನೆ ಕಿರಿಕಿರಿ ಮಾಡುತ್ತಿದ್ದಾನೆ. ಅವರ ಹಿಂದೆ ಕಾಣದ ಕೈಗಳು ಇರಬಹುದು. ಅದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆ ಮನುಷ್ಯನ ಮಾತು ಯಾರ್ ಕೇಳುತ್ತಾರೆ? ಯೋಗೇಶ್ವರ್ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಿಲ್ಲ. ಅವರ ಹಿಂದೆ ಯಾರು ಇದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದಲ್ಲಿ ಕಾಣದ ಕೈಗಳಿರುತ್ತವೆ. ಸಿ.ಪಿ. ಯೋಗೇಶ್ವರ್ ಹಗಲು ಕನಸು ಕಾಣುತ್ತಿದ್ದು, ಆ ಕನಸು ನನಸಾಗುವುದಿಲ್ಲ. ಸದ್ಯ ಎಲ್ಲ ಶಾಸಕರು ಯಡಿಯೂರಪ್ಪ ಪರವಾಗಿ ಇದ್ದಾರೆ. ನಾವು 20 ಜನ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವೆ. ಸಣ್ಣ ಪುಟ್ಟ ಗೊಂದಲ ಕಂಡ ಕಾರಣ ನಾವು ಮುಖ್ಯಮಂತ್ರಿ ಭೇಟಿಯಾಗಿದ್ದೇವೆ. ಕೊರೊನಾ ಸಮಯದಲ್ಲಿ ಕ್ಷೇತ್ರದಲ್ಲಿದ್ದು ಜನರ ಸೇವೆ ಮಾಡಿ ಎಂದು ನಮಗೆ ಸಿಎಂ ಯಡಿಯೂರಪ್ಪ ಹೇಳಿ ಕಳಿಸಿದ್ದಾರೆ ಎಂದ್ರು.
ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಜನಸೇವೆ ಮಾಡಬೇಕು, ಅವರ ಕಷ್ಟಕ್ಕೆ ಸ್ಪಂದಿಸಬೇಕು. ಕೊರೊನಾ ಸಮಯದಲ್ಲಿ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಬದಲಾವಣೆ ಪ್ರಶ್ನೆಯೇ ಇಲ್ಲ. ಆದರೆ ಯಡಿಯೂರಪ್ಪ ಬದಲಾವಣೆ ಮಾಡಬೇಕು ಎಂದುಕೊಂಡವರಿಗೆ ಒಳ್ಳೆಯದಾಗಲಿ ಎಂದು ಶಾಸಕ ದಡೇಸೂಗುರು ಇದೇ ಸಂದರ್ಭದಲ್ಲಿ ಹೇಳಿದರು.