ಕೊಪ್ಪಳ: ಬಜೆಟ್‌ನಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಘೋಷಣೆಯಾಗಿದೆ. ಇದು ಕೇವಲ ಒಂದು ಪರ್ಸೆಂಟ್ ಮಾತ್ರ. ಇನ್ನು ಮುಂದೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ನಡೆಯಲಿದೆ. ಯಡಿಯೂರಪ್ಪ ನಾನು ಯಾವುದೇ ಮನವಿ ಕೊಟ್ಟರೂ ಹಾಗೆಯೇ ಸಹಿ ಹಾಕುತ್ತಾರೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ.
ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿರುವ ಶಾಸಕ ದಡೇಸೂಗೂರು, ರಾಜ್ಯದ ಎಲ್ಲಾ 224 ಕ್ಷೇತ್ರಗಳ ಪೈಕಿ ಕನಕಗಿರಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಇರುತ್ತದೆ. ನನ್ನ ಮನವಿಗೆ ಯಡಿಯೂರಪ್ಪ ಹಾಗೆಯೇ ಸಹಿ ಹಾಕುತ್ತಾರೆ. ಯಾವುದೇ ರೀತಿಯಲ್ಲೂ ಪೆಂಡಿಂಗ್ ಇಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದೇ ನಮ್ಮ ಸೌಭಾಗ್ಯ. ಯಡಿಯೂರಪ್ಪ ಸಿಎಂ ಆದ್ರೆ, ನಾನೇ ಮುಖ್ಯಮಂತ್ರಿಯಾದ ಹಾಗೆ. ಈ ಸಮಯದಲ್ಲಿ ನಾನು ಯಾವ ಸ್ಥಾನ ಕೇಳಿದರೂ ಸಿಎಂ ಕೊಡುತ್ತಾರೆ. ಆದರೆ, ಬಿಎಸ್ವೈಗೆ ಟೆನ್ಶನ್ ಕೊಡುವುದಿಲ್ಲ ಎಂದು ಬಸವರಾಜ್ ದಡೇಸೂಗೂರು ಹೇಳಿದರು.