ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿಧಾನವಾಗಿ ದಲಿತರ ಹಾಗೂ ಮುಸ್ಲಿಂ ಸಮುದಾಯದ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ನರೇಂದ್ರ ಮೋದಿ ಈ ದೇಶಕ್ಕೆ, ಸಮಾಜಕ್ಕೆ ಸ್ಲೋ ಪಾಯಿಜನ್ ನೀಡುತ್ತಿದ್ದಾರೆ ಎಂದು ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ಭಷ್ಟಾಚಾರದಲ್ಲಿ ತೊಡಗಿದ್ದಾರೆ. ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಬಿಜೆಪಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಅನ್ಯಾಯ ಮಾಡಿದೆ. ಮುಸ್ಲಿಂರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು ಎಂಬ ಸಿ ಟಿ ರವಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಅವರು ಬುದ್ದಿಜೀವಿಗಳು. ಈ ರೀತಿ ಮಾತನಾಡಬಾರದು.
ಮುಸ್ಲಿಂ ಜನಾಂಗವೊಂದರಿಂದಲೇ ಶಾಸಕರು ಆಯ್ಕೆಯಾಗಲು ಆಗುವುದಿಲ್ಲ. ಹಾಗಾದರೆ, ಕೊಪ್ಪಳದಲ್ಲಿ 45 ಸಾವಿರ ಜನ ಮುಸ್ಲಿಂ ಜನಾಂಗದವರಿದ್ದಾರೆ. ಇಲ್ಲಿ ಎಲ್ಲಾ ಜನಾಂಗದವರು ಸೇರಿ ಮತ ಹಾಕಿದರೆ ಮಾತ್ರ ಆಯ್ಕೆಯಾಗಲು ಸಾಧ್ಯ ಎಂದರು. ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಸಚಿವರಾಗುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾದಿ ಬೀದಿಯಲ್ಲಿ ಹೋಗುವವರು ಸಚಿವರಾಗಲು ಅವಕಾಶವಿದೆ.
ಇನ್ನು, ಅವರನ್ನು ಸಚಿವರನ್ನಾಗಿ ಮಾಡುವುದರಲ್ಲಿ ಏನು ವಿಶೇಷವಿಲ್ಲ. ಸಚಿವರಾಗಿದ್ದವರೇ ಅವರು. ಅನೇಕರು ಆರೋಪಗಳನ್ನು ಹೊತ್ತಿದ್ದಾರೆ. ರಾಜಕಾರಣಿಗಳಿಗೆ ನೈತಿಕತೆ ಇಲ್ಲ. ರಾಜಕಾರಣಿಗಳಿಗೆ ನೈತಿಕತೆ ಇದ್ದರೆ ಇಂತಹ ಸರ್ಕಾರಗಳು ಬರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಓದಿ: ಅಮಾನವೀಯ ಘಟನೆ : ಮಂಡ್ಯದಲ್ಲಿ ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ