ಕುಷ್ಟಗಿ (ಕೊಪ್ಪಳ): ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಪರಿಶುದ್ಧ ಗಾಳಿಗಾಗಿ ಹಾತೊರೆಯುವಂತಾಗಿದೆ. ಈ ಪರಿಸ್ಥಿತಿ ನಮ್ಮಲ್ಲಿ ಬರುವುದು ಬೇಡ ಎನ್ನುವುದಾದರೆ ಹೆಚ್ಚು- ಹೆಚ್ಚು ಮರಗಳನ್ನು ಬೆಳಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ವಿಶ್ವ ಪರಿಸರ ದಿನ ಪ್ರಯುಕ್ತ ತಾಲೂಕಿನ ನಿಡಶೇಷೆ ಕೆರೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಶುದ್ಧ ಗಾಳಿಯ ಅಭಾವವಿದೆ. ಮುಂಬೈ ನಗರದಲ್ಲಿ ಕೋವಿಡ್-19 ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಿಂದ ವಾಪಸ್ ಆದ ಕೂಲಿ ಕಾರ್ಮಿಕರಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆ ಆಗುತ್ತಿದೆ ಎಂದರು.
ಬೀಜ ಮೊಳಕೆಹೊಡೆದು ಗಿಡವಾಗಿ ಬೆಳೆಯುವವರೆಗೂ ಅರಣ್ಯ ಇಲಾಖೆಗೆ ಸಿಬ್ಬಂದಿ ವೇತನ ಸೇರಿ 25,000 ರೂ. ಖರ್ಚು ಆಗುತ್ತದೆ. ಇಂತಹ ಮರಗಳನ್ನು ಕಡಿದು ಮಾರಾಟ ಮಾಡಿದರೆ 5,000 ರೂ. ಬರುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಉಪಾಧ್ಯಕ್ಷ ಪರಸಪ್ಪ ಕತ್ತಿ, ಪ್ರಾದೇಶಿಕ ಅರಣ್ಯ ಇಲಾಖೆಯ ವಲಯಾಧಿಕಾರಿ ಅನ್ವರ್, ಟಿ. ಬಸವರಾಜ್ ಉಪಸ್ಥಿತರಿದ್ದರು.