ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ: ಬಯ್ಯಾಪೂರ ಸವಾಲು - ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸುದ್ದಿ
ಭ್ರಷ್ಟಾಚಾರ ಆರೋಪವನ್ನ ದಾಖಲೆ ಸಮೇತ ನಿರೂಪಿಸಲಿ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆಗೂ ಸಿದ್ದನಿದ್ದೇನೆ. ಇಲ್ಲವೇ ಅವರ ಪಕ್ಷದ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದ್ದು, ಸಿಬಿಐ, ಸಿಒಡಿ, ಸಿಐಡಿ, ಲೋಕಾಯುಕ್ತ, ಇಲ್ಲವೇ ನ್ಯಾಯಾಂಗ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಲಿ, ಅದೆಲ್ಲದಕ್ಕೂ ನಾನು ತಯಾರಿದ್ದೇನೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಘೋಷಿಸಿದ್ದಾರೆ.
ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಯ ಅಭಿವೃದ್ಧಿ ಸಂದರ್ಭದಲ್ಲಿ ಕೇಳಿ ಬಂದಿರುವ 88 ಲಕ್ಷ ರೂ. ಭ್ರಷ್ಟಾಚಾರ ಆರೋಪದ ಬಗ್ಗೆ ಮಾತನಾಡಿರುವ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಮಾತು ಮುಂದುವರೆಸಿದ ಅವರು, ಭ್ರಷ್ಟಾಚಾರ ಆರೋಪವನ್ನ ದಾಖಲೆ ಸಮೇತ ನಿರೂಪಿಸಲಿ. ಆಗ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆಗೂ ಸಿದ್ದನಿದ್ದೇನೆ ಎಂದು ಘೋಷಿಸಿದರು. ಅವರದ್ದೇ ಪಕ್ಷದ ಸರ್ಕಾರಗಳು ರಾಜ್ಯ ಮತ್ತು ಕೇಂದ್ರದಲ್ಲಿವೆ. ಹೀಗಾಗಿ ಸಿಬಿಐ, ಸಿ.ಐ.ಡಿ, ಲೋಕಾಯುಕ್ತ, ನ್ಯಾಯಾಂಗ ತನಿಖಾ ಸಂಸ್ಥೆಗಳಲ್ಲಿ ಯಾವುದಾದರೂ ಒಂದು ಸಂಸ್ಥೆಯಿಂದ ತನಿಖೆ ನಡೆಸಲಿ, ಅದಕ್ಕೆ ತಾವು ಸಿದ್ಧ ಇರುವುದಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ತನಿಖೆಯ ವಿಚಾರದಲ್ಲಿ ನಾನು ತಯಾರಿದ್ದೇನೆ, ಸಂಬಂಧಿಸಿದ ಅಧಿಕಾರಿಗಳ ವಿಷಯ ತನಗೆ ಸಂಬಂಧಿಸಿದ್ದಲ್ಲ. ಇಲಾಖೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಸಹ ಆಗಿತ್ತು. ಈ ವಿಚಾರವಾಗಿ ಕೆರೆ ಅಭಿವೃಧ್ಧಿ ಸಮಿತಿ ಸರ್ಕಾರಕ್ಕೆ 3 ಕೋಟಿ ರೂ. ಬೇಡಿಕೆ ಪ್ರಸ್ತಾಪಿಸಿರುವ ಪತ್ರವನ್ನು ಸುದ್ದಿಗಾರರ ಗಮನಕ್ಕೆ ತಂದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ ರಾಜಿನಾಮೆಯ ವಿಷಯ ಕೇಳಿಲ್ಲ, ಯಾಕೆಂದರೆ ಅವರಿಗೆ ಕೇಳುವ ಹಕ್ಕಿಲ್ಲ, ಆದರೆ ನನಗೆ ರಾಜೀನಾಮೆ ನೀಡುವ ಹಕ್ಕಿದೆ. ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿರುವ ಅವರ ಆರೋಪ ಸತ್ಯಾಂಶದಿಂದ ಕೂಡಿಲ್ಲ. ಲೂಟಿ ಮಾಡಿರುವ ಕೆಟ್ಟ ಕೆಲಸ ತಾವೆಂದೂ ಮಾಡಿಲ್ಲ, ಮಾಡುವುದು ಇಲ್ಲ. ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ಜನರ ದಿಕ್ಕು ತಪ್ಪಿಸಲು ಕೆಲಸವಾಗಿದೆ ಎಂದು ತಿರುಗೇಟು ನೀಡಿದರು.
ಓದಿ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಕುಷ್ಟಗಿಯಲ್ಲಿ ಮುನ್ನೆಚ್ಚರಿಕಾ ಕ್ರಮ
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಎರಡು ಬಾರಿ ಶಾಸಕರಾಗಿದ್ದು, ಆ ಅವಧಿಯಲ್ಲಿ ತಮ್ಮದೇ ಸರ್ಕಾರ ಆಡಳಿತದಲ್ಲಿತ್ತು. ನಿತ್ಯವೂ ನಿಡಶೇಸಿ ಕೆರೆಯ ಪಕ್ಕದಲ್ಲಿ ಹಾದು ಹೋಗುತ್ತಿರುವ ಅವರೇಕೆ ನಿಡಶೇಸಿ ಕೆರೆ ಅಭಿವೃಧ್ಧಿ ಪಡಿಸಲು ಮನಸ್ಸು ಮಾಡಲಿಲ್ಲ ಎಂದರು.
ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ದೂರು ನೀಡುವ ಬಗ್ಗೆ ಮಾಜಿ ಶಾಸಕರು, ಪ್ರಸ್ತಾಪಿಸಿದ್ದಾರೆ. ತಾವೂ ಈ ವಿಚಾರವಾಗಿ ಅದೇ ಸಚಿವರಿಗೆ ಶಾಸಕನಾಗಿ ಅವರ ಗಮನಕ್ಕೆ ತರುವೆ ಎಂದರು. ಕೆರೆ ಅಭಿವೃದ್ಧಿ ಸಮಿತಿ ವಿಸರ್ಜನೆ ಸಮಿತಿ ಅಧ್ಯಕ್ಷರ ವೈಯಕ್ತಿಕ ನಿರ್ಧಾರ ಪ್ರಶ್ನಿಸುವುದಿಲ್ಲ. ಕೆರೆಯ ಅಭಿವೃದ್ಧಿ ವಿಚಾರದಲ್ಲಿ ಲೂಟಿಯಾಗಿಲ್ಲ ಎಂದರು.