ಕೊಪ್ಪಳ: ತಾಲೂಕ್ ಪಂಚಾಯತ್‍ನ್ನು ರದ್ದುಪಡಿಸಬೇಕು ಎಂಬ ಅಭಿಪ್ರಾಯವಿದೆ. ಆದರೆ ಈ ಬಾರಿ ತಾಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಯಥಾಪ್ರಕಾರ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಂವಿಧಾನ ಬದ್ದವಾಗಿ ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಎಂಬ ತ್ರಿಟೈರ್ ಸಿಸ್ಟಮ್ ಇದೆ. ಜನರ ಅಭಿಪ್ರಾಯ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಇರಲಿ, ತಾಲೂಕ ಪಂಚಾಯತ್ ಬೇಡ ಎಂಬುದಾಗಿದೆ. ಇದನ್ನು ರಾಜ್ಯ ಸರ್ಕಾರ ಮಾಡಲು ಬರುವುದಿಲ್ಲ ಕೇಂದ್ರ ಸರ್ಕಾರ ಮಾಡಬೇಕು. ನಾವು ತಾಲೂಕ್ ಪಂಚಾಯತ್ ರದ್ದುಪಡಿಸುವ ನಿರ್ಣಯ ಪಾಸ್ ಮಾಡಿ ಕೇಂದ್ರಕ್ಕೆ ಕಳಿಸುತ್ತೇವೆ. ಆದರೆ ಮುಂಬರಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಯಥಾ ಪ್ರಕಾರ ಏಕಕಾಲದಲ್ಲಿ ನಡೆಯಲಿದೆ ಎಂದರು.
ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಅಂಜನಾದ್ರಿಯಲ್ಲಿ ಸಾಮಾನ್ಯವಾಗಿ ಏನೇನು ಕೆಲಸವಾಗಬೇಕು ಎಂಬುದನ್ನು ಗಮನಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶೌಚಾಲಯ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯಗಳ ವ್ಯವಸ್ಥೆಯನ್ನು ಹಾಗೂ ಇಲ್ಲಿನ ಜನಪ್ರತಿನಿಧಿಗಳ, ಜನರ ಅಪೇಕ್ಷೆಗಳಿಗೆ ತಕ್ಕಂತೆ ಸೌಲಭ್ಯ ಕಲ್ಪಿಸುವ ಕುರಿತಂತೆ ಕೆಲಸ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ದೇವಸ್ಥಾನದ ಹಣವನ್ನು ಬಳಸಿಕೊಂಡು ಸಹ ತಾತ್ಕಾಲಿಕ ಕೆಲಸಗಳನ್ನು, ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳುತ್ತಾರೆ. ಇದನ್ನು ಹೊರತುಪಡಿಸಿ ಪ್ರವಾಸೋದ್ಯಮ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವರನ್ನು ಮುಂದಿನ ಏಪ್ರಿಲ್ ಮೊದಲ ವಾರದಲ್ಲಿ ಕರೆದುಕೊಂಡು ಬಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಡುವುದರಿಂದ ಏನು ಪ್ರಯೋಜನವಿಲ್ಲ. ನಾನು ಪ್ರಾಕ್ಟಿಕಲ್ ಆಗಿ ಕೆಲಸ ಮಾಡಿಸುವೆ. ಧಾರ್ಮಿಕ ದತ್ತಿ, ಪ್ರವಾಸೋದ್ಯಮ ಹಾಗೂ ನನ್ನ ಇಲಾಖೆಯಿಂದ ಏನೇನು ಕೆಲಸ ಮಾಡಬೇಕು ಅದನ್ನು ಮಾಡಲು ಗಮನ ನೀಡಲಾಗುತ್ತದೆ. ಉಪಕಾಲುವೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ನಮ್ಮ ಇಲಾಖೆಯಲ್ಲಿ ಹಣವಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.