ಕೊಪ್ಪಳ: ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಕಾನೂನು ರೀತಿಯಾಗಿ ಶಿಕ್ಷೆ ಕೊಡಿಸಲು ಸಂತ್ರಸ್ತೆ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಈ ಕುರಿತು ಅವರು ಮಾತನಾಡಿದರು. ಇದು ಕ್ರಿಮಿನಲ್ ಪ್ರಕರಣವಾಗಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ಸಂತ್ರಸ್ತ ಯುವತಿ ದೂರು ನೀಡುವುದಿಲ್ಲ ಎಂದು ಹೇಳಿದ್ದು ಗಮನಕ್ಕೆ ಬಂದಿದೆ. ಸದ್ಯ ಯುವತಿ ಒತ್ತಡದಲ್ಲಿದ್ದು ಆ ರೀತಿ ಹೇಳಿರಬಹುದು. ಆದರೆ, ಮುಂದೆ ಕಾನೂನಿನಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಅವರು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಮರಳು ಪೂರೈಕೆಗೆ ಸಿದ್ಧತೆ: ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ಬರಲಿದೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಯಲ್ಲಿ ಹಟ್ಟಿ ಚಿನ್ನದ ಗಣಿಗೆ ಪರವಾನಿಗೆ ನೀಡಲಾಗುವುದು. ರಾಜ್ಯದಲ್ಲಿ ಈಗ 8 ದಶಲಕ್ಷ ಟನ್ ಮರಳಿನ ಕೊರತೆಯಿದೆ. ಬೇಡಿಕೆಗೆ ತಕ್ಕಂತೆ ಮರಳು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಪ್ರತ್ಯೇಕ ಪರವಾನಗಿ: ಕೆಲ ಸಮುದಾಯ ಕಲ್ಲು ಒಡೆದು ಜೀವನ ಮಾಡುವ ಬಗ್ಗೆ ನನಗೆ ಗೊತ್ತಿದೆ. ಹೀಗೆ ಕಲ್ಲು ಒಡೆಯುವವರಿಗೆ ಪ್ರತ್ಯೇಕ ಪರವಾನಗಿ ನೀಡಲಾಗುವುದು. ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ ನಿರ್ವಹಣೆ ವೈಫಲ್ಯವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಕಾರಣ: ಎಸ್.ಆರ್.ಹಿರೇಮಠ