ಕೊಪ್ಪಳ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸಿ.ಸಿ. ಪಾಟೀಲ್ ಭೇಟಿ ನೀಡಿ, ಪರಿಶೀಲನೆ ಬಳಿಕ ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿದರು. ಬಳಿಕ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ನ ಅಂಬೇಡ್ಕರ್ ನಗರ, ಪಂಪಾವನ, ತುಂಗಭದ್ರಾ ಜಲಾಶಯ ಎಡದಂಡೆ ಕಾಲುವೆ, ಮುದ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಶೀಲಿಸಿ ಸಂತ್ರಸ್ತರ ಸಮಸ್ಯೆಗಳನ್ನು ಸಚಿವ ಪಾಟೀಲ್ ಆಲಿಸಿದರು. ಈ ಕೂಡಲೇ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓಗೆ ಸೂಚಿಸಿದ್ರು.
ಸಚಿವ ಸಂಪುಟ ರಚನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಏಕಾಂಗಿಯಾಗಿ ಸಂಚರಿಸಿ ಪ್ರವಾಹ ಪೀಡಿತರ ನೆರವಿಗೆ ನಿಂತಿದ್ದರು. ಸಂಪುಟ ರಚನೆಯಾದ ಬಳಿಕ ನೆರೆಪೀಡಿತ ಪ್ರದೇಶಗಳಿಗೆ ಭೇಡಿ ನೀಡುವಂತೆ ಸಿಎಂ ಸೂಚಿಸಿದ್ದರು. ಅದರಂತೆ ಭೇಟಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಪ್ರವಾಹದಿಂದ ಮನೆ ಹಾನಿಯಾದವರಿಗೆ ಕ್ರಮವಾಗಿ ₹ 25 ಸಾವಿರ, ₹ 50 ಸಾವಿರ ಹಾಗೂ ₹ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಪರಿಹಾರ ನೀಡಲು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಇದಕ್ಕಾಗಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಅಧ್ಯಯನ ನಡೆಸಬೇಕು. ಸಮೀಕ್ಷೆ ನಂತರ ಎಷ್ಟು ಪರಿಹಾರ ನೀಡಬೇಕು ಎಂಬುದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಪಕ್ಷದಲ್ಲಿ ಎದ್ದಿರುವ ಭಿನ್ನಮತದ ಕುರಿತು ಕೇಳಿದ ಪ್ರಶ್ನೆಗೆ, ನಿಮಗೆ ಕೈಮುಗಿದು ಕೇಳುತ್ತೇನೆ. ನಾವು ಪ್ರವಾಹದ ಪರಿಹಾರದ ಪರಿಸ್ಥಿತಿ ಅವಲೋಕಿಸುತ್ತಿದ್ದು, ಭಿನ್ನಮತದ ಬಗ್ಗೆ ದಯವಿಟ್ಟು ಮಾತು ಬೇಡ. ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು. ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.