ಕೊಪ್ಪಳ : ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ತಯಾರಕರ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.
ನಗರದ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 18 ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ಮಾಡುತ್ತಿದ್ದೇವೆ.
ಸೆಪ್ಟಂಬರ್‌ನಿಂದ ಡಿಸೆಂಬರ್ವರೆಗೆ ನಾಲ್ಕು ತಿಂಗಳ ವೇತನ ಪಾವತಿಯಾಗಿಲ್ಲ. ನಾವು ಇದೇ ವೇತನ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಹೀಗಾಗಿ, ಬಾಕಿ ಇರುವ ನಾಲ್ಕು ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಓದಿ-2020: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
ಅಲ್ಲದೆ, ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಟ ಕೂಲಿ ಜಾರಿ ಮಾಡಬೇಕು, ಪಿಎಫ್, ಇಎಸ್ಐ ಸೌಲಭ್ಯ ಜಾರಿಗೊಳಿಸಬೇಕು, ಶಾಲಾ ಸಿಬ್ಬಂದಿಯನ್ನಾಗಿ ಪರಿವರ್ತಿಸಬೇಕು, ಬೇಸಿಗೆ ಹಾಗೂ ದಸರಾ ರಜೆ ಘೋಷಣೆ ಮಾಡಬೇಕು ಎಂಬುದು ಸೇರಿ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಶೀಲವಂತರ, ಎ ಬಿ ದಿಂಡೂರು, ನನ್ನೂಸಾಬ ನೀಲಿ, ಸುಮಂಗಲಾ, ಸಾವಿತ್ರಿ, ಸುಮಾ ಅಬ್ಬಿಗೇರಿ ಸೇರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.