ಕೊಪ್ಪಳ: ನಮ್ಮ ದೊಡ್ಡಪ್ಪ ಹಾಗೂ ಕುಟುಂಬಸ್ಥರು ನೀಡಿದ ಮಾನಸಿಕ ಕಿರುಕುಳ ತಾಳಲಾರದೆ ಪೀಠ ತ್ಯಾಗ ಮಾಡಿದೆ ಎಂದು ತಾಲೂಕಿನ ಅಳವಂಡಿ ಸಿದ್ದೇಶ್ವರ ಮಠದ ಮಾಜಿ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಅಳವಂಡಿ ಗ್ರಾಮದ ಮಠದಲ್ಲಿ ಇಂದು ದಿಢೀರ್ ಪ್ರತ್ಯಕ್ಷರಾಗಿದ್ದ ಸಿದ್ದಲಿಂಗ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಪೀಠತ್ಯಾಗದ ಹಿಂದಿನ ಕಾರಣಗಳನ್ನು ವಿವರಿಸಿದರು. ಮಠದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳನ್ನು ನಾನು ವಿರೋಧಿಸಿದ್ದೆ. ಇದಕ್ಕೆ ನನ್ನ ಪೂರ್ವಾಶ್ರಮದ ಕುಟುಂಬಸ್ಥರೇ ನನಗೆ ಕಿರುಕುಳ ನೀಡಿದರು. ಇಲ್ಲಿ ನಾನು ಹೆಸರಿಗೆ ಮಾತ್ರ ಸ್ವಾಮೀಜಿಯಾಗಿದ್ದೆ. ಯಾವುದೇ ಸ್ವಾತಂತ್ರ್ಯ, ಅಧಿಕಾರವಿರಲಿಲ್ಲ. ದೊಡ್ಡಪ್ಪ ಗುರುಮೂರ್ತಿ ಸ್ವಾಮೀಜಿ ಅವರು ಆಸ್ತಿ ಸಲುವಾಗಿ ಸಾಕಷ್ಟು ಕಿರುಕುಳ ನೀಡುತ್ತಿದ್ದರು.
ಸಸಿ ನೆಡುವ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದರು. ಬೆಟ್ಟದೂರಿನಲ್ಲಿರುವ 11 ಎಕರೆ ಭೂಮಿ ಭಕ್ತರು ನೀಡಿದ್ದ ದಾನದ ಜಾಗಕ್ಕೂ ದೊಡ್ಡಪ್ಪ ತಮ್ಮ ಮಾಲೀಕತ್ವಕ್ಕಾಗಿ ವಿವಾದ ಮಾಡಿದ್ದರು. ಇಡೀ ಮಠವನ್ನೇ ಖಾಸಗಿ ಆಸ್ತಿಯನ್ನು ದೊಡ್ಡಪ್ಪ ಗುರುಮೂರ್ತಿ ಸ್ವಾಮಿ ಹಾಗೂ ಕುಟುಂಬದವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಠದ ಕಮಿಟಿಯಲ್ಲಿ ಕುಟುಂಬದ 8 ಜನರು ಇದ್ದಾರೆ. ಗ್ರಾಮಸ್ಥರು ಒಬ್ಬರೂ ಇಲ್ಲದಿರುವುದನ್ನು ನಾನು ವಿರೋಧಿಸಿದೆ. ಕುಟುಂಬಸ್ಥರು ನೀಡುತ್ತಿದ್ದ ಮಾನಸಿಕ ಕಿರುಕುಳ, ಮನಸ್ಥಿತಿ ಕುಗ್ಗಿಸುವಿಕೆ ಕೆಲಸದಿಂದ ನಾನು ಬೇಸತ್ತು ಹೋಗಿದ್ದೆ.
ಮುಂಡರಗಿ ಕಾಲೇಜಿನಲ್ಲ ಪಾಠ ಮಾಡಲು ಹೋಗುತ್ತಿದ್ದಾಗ ಯುವತಿ ನನ್ನನ್ನು ಪ್ರೀತಿಸಿದ್ದು ನಿಜ. ಇದನ್ನೇ ನೆಪ ಮಾಡಿಕೊಂಡು ದೊಡ್ಡಪ್ಪ ಹಾಗೂ ಕುಟುಂಬದವರು ಸಾಕಷ್ಟು ಮಾನಸಿಕ ಕಿರುಕುಳ ನೀಡಿ ಪೀಠತ್ಯಾಗಕ್ಕೆ ಒತ್ತಾಯಪೂರ್ವಕವಾಗಿ ರುಜು ಮಾಡಿಸಿಕೊಂಡರು. ಈ ವಿಷಯವನ್ನು ನಾನು ಪೀಠ ತ್ಯಾಗಕ್ಕೂ ಮುಂಚೆ ಜನರಿಗೆ ತಿಳಿಸೋಣ ಎಂದುಕೊಂಡಿದ್ದೆ. ನನಗೆ ಭಯ ಹುಟ್ಟಿಸಿ ಇಲ್ಲಿಂದ ಓಡಿಸಿದರು ಎಂದು ಸಿದ್ದಲಿಂಗ ಸ್ವಾಮೀಜಿ ತಮ್ಮ ಪೀಠತ್ಯಾಗದ ಹಿಂದಿನ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.