ಕೊಪ್ಪಳ: ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಜ.4 ರಂದು ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಮಾಜಿ ಸಂಸದ ಹಾಗೂ ಕುರುಬ ಸಮುದಾಯ ಎಸ್ಟಿ ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರುಪಾಕ್ಷಪ್ಪ ಹೇಳಿದರು.
ಕೊಪ್ಪಳದ ಮೀಡಿಯಾ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಕ್ಷಾತೀತ ಹೋರಾಟವಾಗಿದ್ದು ಸಮುದಾಯದ ಸ್ವಾಮೀಜಿಗಳ ನೇತೃತ್ವವಿರಲಿದೆ. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಬೃಹತ್ ಸಮಾವೇಶ ಜ.4 ರಂದು ಸಿಂಧನೂರಿನಲ್ಲಿ ನಡೆಯಲಿದೆ.
ಜ.5 ರಂದು ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಮಾವೇಶವನ್ನು ಕಲಬುರಗಿಯಲ್ಲಿ ಆಯೋಜಿಸಲಾಗಿದೆ. ಇದಾದ ಬಳಿಕ ಜ. 15 ರಿಂದ ಕಾಗಿನೆಲೆ ಪೀಠದಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ನಡೆಸಿ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುತ್ತದೆ ಎಂದರು.
ಓದಿ: ವಿಪ್ ಉಲ್ಲಂಘಿಸಿದ ಮೂವರು ಬಿಜೆಪಿ ಸದಸ್ಯರು: ಸದಸ್ಯತ್ವ ರದ್ದುಪಡಿಸುವಂತೆ ಬಿಜೆಪಿ ದೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ಪಂದನೆ ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷೆಯನ್ನು ರೂಪಿಸಲಾಗುತ್ತದೆ. ಕುರುಬರ ಸಮುದಾಯವನ್ನು ಬುಡಕಟ್ಟು ಜನಾಂಗವೆಂದು ಬ್ರಿಟಿಷ್ ಸರ್ಕಾರ ಗುರುತಿಸಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮದ್ರಾಸ್ ಪ್ರಾಂತ್ಯದ ಕುರುಬ, ಕುರುಂಬ, ಕುರವನ್ ಹೆಸರಿನಲ್ಲಿ ಎಸ್ಟಿಗೆ ಸೇರಿಸಲಾಗಿದೆ. ಬಾಂಬೆ ಕರ್ನಾಟಕದ ಜೇನು ಕುರುಬ, ಕಾಡು ಕುರುಬ ಎಸ್ಟಿ ಪಟ್ಟಿಯಲ್ಲಿವೆ. ಕೊಡಗಿನಲ್ಲಿಯೂ ಕುರುಬರು ಎಸ್ಟಿ ಪಟ್ಟಿಯಲ್ಲಿದ್ದಾರೆ ಎಂದು ವಿರೂಪಾಕ್ಷಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.