ಗಂಗಾವತಿ(ಕೊಪ್ಪಳ): ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಹೊಸಳ್ಳಿ ಗ್ರಾಮ ಒಂದರಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಜನರಿಗೆ ಸಾಮೂಹಿಕವಾಗಿ ಜ್ವರ ಕಾಣಿಸಿಕೊಂಡ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ಚಿಕಿತ್ಸೆ ನೀಡಲು ಆರಂಭಿಸಿತು. ಪರಿಣಾಮ ಜ್ವರ ಹರಡುವಿಕೆ ಕೊಂಚ ನಿಯಂತ್ರಣಕ್ಕೆ ಬಂದಿದೆ.
ಗ್ರಾಮದಲ್ಲಿ ಒಟ್ಟು 50ಕ್ಕೂ ಹೆಚ್ಚು ಜನರಿಗೆ ಜ್ವರ, ಭೇದಿ, ವಾಂತಿ, ಮೈ-ಕೈ ಸುಸ್ತು ಮೊದಲಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದವು. ಈ ಬಗ್ಗೆ ಈಟಿವಿ ಭಾರತ ‘ಹೊಸಳ್ಳಿಯಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಜ್ವರ: ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪ’ ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಇದನ್ನು ಗಮನಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಜನರಿಗೆ ಚಿಕಿತ್ಸೆ ನೀಡಿದರು.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಮುಷ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭರತ್ ಪಾಟೀಲ್, ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಈ ಪೈಕಿ ಶೇ.10ರಷ್ಟು ಜನರ ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿತ್ತು. ಇದುವರೆಗೂ ಯಾವುದೇ ಡೆಂಘಿಯಂತಹ ರೋಗ ಪತ್ತೆಯಾಗಿಲ್ಲ. ಆದರೆ ಖಾಸಗಿ ಆಸ್ಪತ್ರೆಯವರು ಕಿಟ್ ಮಾದರಿಯಲ್ಲಿ ಪರೀಕ್ಷಿಸಿದಾಗ ಡೆಂಘಿ ಇದೆ ಎಂದು ಬಂದಿದೆ. ಆದರೆ ಅದನ್ನು ಮರು ಪರೀಕ್ಷೆಗೆ ಕಳಿಸಿದಾಗ ಮತ್ತೆ ಡೆಂಘಿ ಇಲ್ಲವೆಂದು ಬಂದಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೇ ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಯಿಂದಾಗಿ ಹಾಗೂ ತಾಪಮಾನದ ಏರಿಕೆಯಿಂದಾಗಿ ಕೆಲವರಿಗೆ ಜ್ವರದ ಸಮಸ್ಯೆ ಕಾಣಿಸಿಕೊಂಡಿದ್ದು ನಿಜ. ಆದರೆ ಇದಿಗ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದರು.
ಗ್ರಾಮದಲ್ಲಿ ಸ್ವಚ್ಛತೆಯ ಕೊರತೆಯಿಂದ ಕೆಲವರಲ್ಲಿ ಜ್ವರ ಕಾಣಿಸಿಕೊಂಡಿದೆ. ತಕ್ಷಣದಿಂದ ಸ್ವಚ್ಛತೆ ಕೈಗೊಳ್ಳುವಂತೆ ಪಂಚಾಯತಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಭರತ್ ಪಾಟೀಲ್ ಹೇಳಿದರು.