ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ತಾವರಗೇರಾ ವ್ಯಾಪ್ತಿಯ ಗಾಣಗಿತ್ತಿ ಗುಡ್ಡದಲ್ಲಿ ಶುಕ್ರವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಗಾಣಗಿತ್ತಿ ಗುಡ್ಡದ ತುತ್ತತುದಿಯಲ್ಲಿ ಚಿರತೆ ಕುಳಿತಿರುವ ಫೋಟೋವನ್ನು ಸ್ಥಳೀಯರು ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಅನ್ವರ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ರಾತ್ರಿ ಗಸ್ತು ಆರಂಭಿಸಿದ್ದಾರೆ. ಜೊತೆಗೆ ಒಬ್ಬಂಟಿಯಾಗಿ ಸಂಚರಿಸದಂತೆ ಹಾಗೂ ಚಿರತೆ ಕಂಡ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಚಿರತೆಯ ಚಲನ-ವಲನಗಳನ್ನು ಗಮನಿಸಿ, ಬೋನ್ ಇಡುವ ವ್ಯವಸ್ಥೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗಣಿ ಹೇಳಿದರು.