ಗಂಗಾವತಿ : ತಾಲೂಕಿನ ಆನೆಗೊಂದಿ ಬಳಿ ಚಿರತೆಯ ಅಟ್ಟಹಾಸ ಮುಂದುವರೆದಿದೆ. ಸಾಣಾಪುರ ಗ್ರಾಮ ವ್ಯಾಪ್ತಿಯಲ್ಲಿ ಬರುವ ವಿರುಪಾಪುರ ಗಡ್ಡಿಯ ಚಿಂಚಿಕುಂಟ್ರಿ ಎಂಬಲ್ಲಿ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ.
ವಿರುಪಾಪುರ ಗಡ್ಡಿಯ ಚಿಂಚಿಕುಂಟ್ರಿ ಪ್ರದೇಶದ ನಿವಾಸಿ ವಿರುಪಣ್ಣ ಗಾಂಧಿನಗರ ಎಂಬುವರಿಗೆ ಸೇರಿದ ಆಕಳು ಕರುವಿನ ಮೇಲೆ ಚಿರತೆ ಶುಕ್ರವಾರ ದಾಳಿ ಮಾಡಿ ಕರುವನ್ನು ಗಾಸಿಗೊಳಿಸಿದೆ.
ಮನೆಯ ಮುಂದೆ ಕಟ್ಟಿಹಾಕಿದ್ದ ಕರುವಿನ ಮೇಲೆ ದಾಳಿ ಮಾಡಿದ ಚಿರತೆ, ಹೊತ್ತೊಯ್ಯಲು ಪ್ರಯತ್ನಿಸಿದೆ. ಆದರೆ, ಸ್ಥಳೀಯರು ಕೂಗಾಡಿದ್ದರಿಂದ ಗದ್ದಲದಿಂದ ಗಲಿಬಿಲಿಗೊಂಡ ಚಿರತೆ, ಕರುವನ್ನು ಬಿಟ್ಟು ಪರಾರಿಯಾಗಿದೆ ಎನ್ನಲಾಗ್ತಿದೆ.
ದಾಳಿ ನಡೆದ ಪರಿಣಾಮ ಕರುವಿಗೆ ತೀವ್ರ ಗಾಯಗಳಾಗಿವೆ. ವಿರುಪಣ್ಣ ಗಾಂಧಿನಗರ ಸುಮಾರು 30 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇದೇ ಮೊದಲ ಬಾರಿಗೆ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಅಡುಗೆ ಭಟ್ಟನ ಹೊತ್ತೊಯ್ದು ತಿಂದಾಕಿದ ಚಿರತೆ : ಬೆಚ್ಚಿಬಿದ್ದ ಆನೆಗೊಂದಿ ಜನತೆ!
ಕಳೆದ ಎರಡು ದಿನದ ಹಿಂದಷ್ಟೆ ಆನೆಗೊಂದಿ ಗ್ರಾಮದ ನಿವಾಸಿ, ಮೇಗೋಟೆಯಲ್ಲಿರುವ ದುರ್ಗಾ ದೇವಸ್ಥಾನದ ಯುವಕನನ್ನು ಭೀಕರವಾಗಿ ಕೊಂದು ತಿಂದು ಹಾಕಿದೆ. ಈ ಘಟನೆ ಮಾಸುವ ಮುನ್ನವೇ ಇದೀಗ ಚಿರತೆ ಪ್ರತ್ಯಕ್ಷವಾಗಿ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕೂಡಲೇ ಅರಣ್ಯಾಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ