ಕುಷ್ಟಗಿ (ಕೊಪ್ಪಳ): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೊಬ್ಬ ಲ್ಯಾಬ್ ಟೆಕ್ನಿಷಿಯನ್ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಕದಳೀ ನಗರದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಯಡ್ಡೋಣಿ ನಿವಾಸಿ ಮಂಜುಳಾ ಮಂಜುನಾಥ ಕಟ್ಟಿಮನಿ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಮಂಜುಳಾ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊಪ್ಪಳ ತಾಲೂಕು ಮುದ್ದಾಬಳ್ಳಿಯ ಮಂಜುನಾಥ ಕಟ್ಟಿಮನಿಯೊಂದಿಗೆ ಇವರ ವಿವಾಹವಾಗಿತ್ತು. ಪತಿ ಮಂಜುನಾಥ ಕಟ್ಟಿಮನಿ ಕೆನರಾ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸದಲ್ಲಿದ್ದು, ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಮನಸ್ತಾಪದಿಂದ ಪತಿ-ಪತ್ನಿಯೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಬೃಂದಾವನ ಹೋಟೆಲ್ನಲ್ಲಿ ಇಬ್ಬರೂ ಜೊತೆಗೂಡಿ ಊಟ ಮಾಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಇಬ್ಬರ ನಡುವೆ ಜಗಳವಾಗಿದ್ದು, ಪತಿ ಮಂಜುನಾಥ ಪತ್ನಿಯನ್ನು ಮೊಬೈಲ್ ಚಾರ್ಜರ್ ವೈಯರ್ನಿಂದ ಕುತ್ತಿಗೆಗೆ ಬಿಗಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ನಂತರ ಮೃತದೇಹವನ್ನು ಕೊಪ್ಪಳ ರಸ್ತೆಯ ಕದಳೀ ನಗರ ಬಳಿ ಸಜ್ಜೆ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.