ಕೊಪ್ಪಳ: ಚುನಾವಣೆ ಎಂದರೆ ಅದು ಬಿಜೆಪಿ ಗೆಲುವು ಎಂದರ್ಥ. ಹೀಗಾಗಿ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಚುನಾವಣೆ ಇರಲಿ ಬಿಜೆಪಿಗೆ ಗೆಲುವು ನಿಶ್ಚಿತ. ಈ ಹಿಂದಿನ ಉಪಚುನಾವಣೆ, ಲೋಕಸಭಾ ಚುನಾವಣೆಗನ್ನು ಗೆದ್ದಿರುವ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಈ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಮ್ಮ ಪಕ್ಷದಿಂದ ಟಿಕೆಟ್ ಕೊಡುತ್ತೇವೆ ಬನ್ನಿ ಎಂದು ಕರೆದರೆ ಯಾರೂ ಬರುತ್ತಿರಲಿಲ್ಲ. ಆದರೆ, ಈಗ ನಮ್ಮ ಪಕ್ಷ ಗೆಲ್ಲುವ ಪಕ್ಷವಾಗಿದೆ. ಇದರಿಂದಾಗಿ ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ. ಪಕ್ಷದ ಹೈಕಮಾಂಡ್ ಶೀಘ್ರದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಉಪಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವ ಕುರಿತು ಪ್ರತಿಕ್ರಿಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಸಿಬಿಐ ದಾಳಿ ಮಾಡಿದೇ ಹೊರತು ಬಿಜೆಪಿ ಪಕ್ಷವಲ್ಲ. ಅವರು ಈ ಹಿಂದೆ ಹವಾಲಾ ದಂಧೆಯಲ್ಲಿ ತೊಡಗಿ ಸಿಕ್ಕಿಬಿದ್ದಿದ್ದರಿಂದ ಜೈಲಿಗೆ ಹೋಗಿ ಬಂದರು. ಆದರೂ ಅಕ್ರಮ ಮುಂದುವರೆಸಿದ್ದರಿಂದ ಸಿಬಿಐ ದಾಳಿ ಮಾಡಿದೆ ಎಂದರು. ಶಾಲಾ-ಕಾಲೇಜು ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಗೊಂದಲಕ್ಕೆ ತೆರೆ ಎಳೆದರು.