ಕೊಪ್ಪಳ: ತಾಲೂಕಿನ ಹನಕುಂಟಿ ಬಳಿ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಹಬ್ಬಿದ್ದು ಜನರು ಭೀತಿಗೊಂಡಿದ್ದಾರೆ.
ಹೀಗಾಗಿ, ಜನರು ಎಚ್ಚರದಿಂದಿರುವಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ಕಳೆದ 28ರಂದುರಾತ್ರಿ ವೇಳೆ ಗ್ರಾಮದ ಹೊರವಲಯದಲ್ಲಿರುವ ಖಾಸಗಿ ಹಾಲಿನ ಡೈರಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗುತ್ತಿದೆ.
ಡೈರಿಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಪ್ರಾಣಿಯೊಂದು ಸೆರೆಯಾಗಿದೆ. ಆದರೆ, ಅದು ಯಾವ ಪ್ರಾಣಿ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಆದರೆ, ಅದು ಚಿರತೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಅಲ್ಲದೆ ಗ್ರಾಮದ ಕೆಲ ಜನರು ಚಿರತೆಯನ್ನು ಕಂಡಿದ್ದಾರಂತೆ. ಇದರಿಂದಾಗಿ ಜನರು ಚಿರತೆ ಭಯದಲ್ಲಿದ್ದಾರೆ. ಹೀಗಾಗಿ, ಜನರು ಜಾಗೃತವಾಗಿರುವಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ಇದೇ ಖಾಸಗಿ ಹಾಲಿನ ಡೈರಿ ಪಕ್ಕದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು ಚಿರತೆ ಪ್ರತ್ಯಕ್ಷವಾಗಿದೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.