ಕೊಪ್ಪಳ/ಗಂಗಾವತಿ: ಸಣಾಪುರ ಜಲಾಶಯ ಸಾವಿನ ಮನೆಯಂತಾಗಿದ್ದು ಆ ಕಳಂಕ ತಪ್ಪಿಸಲು ಮತ್ತು ಆನೆಗೊಂದಿ ಸುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಸದಾ ಕ್ರಿಯಾಶೀಲವಾಗಿರುವ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಸ್ವಿಮ್ಮಿಂಗ್ ಸೂಟ್ ಹಾಕಿಕೊಂಡು ತಾಲೂಕಿನ ಸಣಾಪುರದ ಜಲಾಶಯದಲ್ಲಿ ಡೈವ್ ಹೊಡೆದರು. ಜಿಲ್ಲಾಧಿಕಾರಿ ಎಂದರೆ ಕಚೇರಿಯಲ್ಲಿ ಕುಳಿತು ಇಡೀ ಜಿಲ್ಲೆಯ ಸಮಸ್ಯೆಗಳನ್ನು ನಿಭಾಯಿಸುವವರು, ಗಾಂಭೀರ್ಯತೆ ಮೈಗೂಡಿಸಿಕೊಂಡಿರುವವರು ಎಂಬುದು ಜನಸಾಮಾನ್ಯರ ಅನಿಸಿಕೆ. ಆದರೆ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಕುಮ್ಮಟದುರ್ಗ, ಬೆಣಕಲ್ ಮತ್ತು ಆನೆಗೊಂದಿ ಭಾಗದಲ್ಲಿ ಸೈಕ್ಲಿಂಗ್, ಹಾರ್ಸ್ ರೈಡಿಂಗ್, ರಾಕ್ ಕ್ಲೈಂಬಿಂಗ್ನಂತ ಚಟುವಟಿಕೆಗಳನ್ನು ಸ್ವತಃ ತಾವೇ ಪ್ರಾಯೋಗಿಕವಾಗಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದೀಗ ಸಣಾಪುರದ ಜಲಾಶಯದಲ್ಲಿ ಬೆಟ್ಟದ ಮೇಲಿಂದ ನೇರವಾಗಿ ನೀರಿಗೆ ಡೈವ್ ಹೊಡೆಯುವ ಮೂಲಕ ಜಿಲ್ಲಾಧಿಕಾರಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಡಿಸಿಯವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಫೌಜೀಯಾ ತರನಮ್, ತಾಲೂಕು ಪಂಚಾಯಿತಿಯ ಇಒ ಮೋಹನ್ ಸಾಥ್ ನೀಡಿದರು.
ಇದನ್ನೂ ಓದಿ:ಹಾನಗಲ್ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯಭೇರಿ