ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಕುಂಬಳಾವತಿಯಿಂದ ಕೊಪ್ಪಳದ ಹುಲಿಗಿಯ 90 ಕಿ.ಮೀ. ದೂರವನ್ನು ಕೇವಲ 7 ತಾಸಿನಲ್ಲಿ ಬಿಳಿ ಎತ್ತುಗಳ ಬಂಡಿಯು ಗುರಿ ಮುಟ್ಟಿ 21 ಸಾವಿರ ರೂ. ನಗದು ತನ್ನದಾಗಿಸಿಕೊಂಡಿವೆ.
ಕುಷ್ಟಗಿ ತಾಲೂಕಿನಲ್ಲಿ ಶ್ರಾವಣ ಮಾಸದ ನಿಮಿತ್ತ ಕಳೆದ ಗುರುವಾರ ರೋಮಾಂಚನಕಾರಿ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಯಿತು. ಹಾಬಲಕಟ್ಟಿಯ ಮಹಾಂತೇಶ ಭೋವಿ ಅವರ ಬಿಳಿ ಎತ್ತುಗಳೆರೆಡು ಕೇವಲ 7 ತಾಸಿನಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿವೆ. ಹಾಗೆಯೇ ಎರಡನೇ ಬಹುಮಾನವನ್ನು ಮಾಲೀಕ ಬೆನಕನಾಳ ಗ್ರಾಮದ ಹನುಮಂತಪ್ಪ ವಾಲೀಕಾರ ಅವರ ಕರಿ ಬಿಳಿ ಎತ್ತುಗಳ ಜೋಡಿ ಪಡೆದಿದ್ದು, 15 ಸಾವಿರ ರೂಪಾಯಿ ತಮ್ಮದಾಗಿಸಿಕೊಂಡಿವೆ.
ಕುಂಬಳಾವತಿಯಿಂದ ಹುಲಿಗಿವರೆಗಿನ ಎತ್ತಿನ ಬಂಡಿಯ ಓಟದಲ್ಲಿ ಸ್ಪರ್ದಿಸಿದ 11 ಎತ್ತಿನ ಬಂಡಿಗಳ ಪೈಕಿ ಅಂತಿಮ ಹಂತದಲ್ಲಿ 6 ಬಂಡಿಗಳು ಗುರಿ ತಲುಪಿವೆ. ಸ್ಪರ್ಧೆಯಲ್ಲಿ ಗೆದ್ದ ಎತ್ತುಗಳೊಂದಿಗೆ ಮಾಲೀಕರು ಹುಲಿಗೆಮ್ಮ ದೇವಿಯ ದರ್ಶನ ಪಡೆದು ಸಂಭ್ರಮಿಸಿದರು.