ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ನಡೆದ ವಿಶಿಷ್ಠ ಲೈಂಗಿಕ ಸಮುದಾಯಗಳ ರಾಜ್ಯ ಮಟ್ಟದ ಸಮಾವೇಶ ಹಾಗೂ 9ನೇ ಸಾರಥ್ಯ ಸ್ವಾಭಿಮಾನದ ಹಬ್ಬವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನ ನೀಡಿದ್ದು ಲಿಂಗ ತಾರತಮ್ಯ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಸಮಾಜ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದರು.
ತೃತೀಯ ಲಿಂಗಿ ಸಮುದಾಯದ ಜನರು ಈಗ ಹೋರಾಟದ ಮೂಲಕ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ತೃತೀಯ ಲಿಂಗಿಗಳಲ್ಲದೆ, ಈ ವಿಶಿಷ್ಠ ಲೈಂಗಿಕತೆಯ ಸಮುದಾಯವೂ ಸಮಾಜದಲ್ಲಿ ಅವಮಾನ ಎದುರಿಸುತ್ತಿದೆ. ಈ ವರ್ಗದ ಜನರು ಜನ್ಮತಃ ಪುರುಷರಾಗಿದ್ದರೂ, ಪುರಷರಂತೆ ಉಡುಗೆ ತೊಡುಗೆಗಳಿದ್ದರೂ ಸಹ ಅವರಲ್ಲಿ ಹೆಣ್ಣಿನ ಭಾವ ಇರುತ್ತದೆ. ಇದರಿಂದ ಅವರು ಸಾಕಷ್ಟು ನೋವು, ಅವಮಾನ ಅನುಭವಿಸುವಂತಹ ಸನ್ನಿವೇಶಗಳು ಎದುರಾಗುತ್ತವೆ. ಆದರೆ, ಸಂವಿಧಾನ ಜೀವಿಸುವ ಹಕ್ಕು, ಸಮಾನತೆಯ ಹಕ್ಕನ್ನು ಎಲ್ಲರಿಗೂ ನೀಡಿದೆ. ಹೀಗಾಗಿ, ಸಮಾಜ ಸಹ ಈ ವರ್ಗದ ಜನರನ್ನು ನೋಡುವ ದೃಷ್ಠಿಕೋನ ಬದಲಾಗಬೇಕಿದೆ. ಇದರ ಜೊತೆಗೆ ತೃತೀಯ ಲಿಂಗಿಗಳಂತೆ ಈ ವರ್ಗದ ಜನರು ಕೂಡ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು.
ವಿಶಿಷ್ಠ ಲೈಂಗಿಕತೆ ಸಮುದಾಯದ ಅನೇಕರು ಮಾತನಾಡಿ ತಮ್ಮ ಬದುಕಿನ ಕುರಿತು, ಅನುಭವಿಸುತ್ತಿರುವ ತೊಂದರೆಗಳ ಕುರಿತು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.