ಗಂಗಾವತಿ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಅಸಮಧಾನಗೊಂಡಿರುವ ಮಾಜಿ ಶಾಸಕ ಹೆಚ್ ಆರ್ ಶ್ರೀನಾಥ್ ಅವರ ಮನೆಗೆ ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು ಭೇಟಿ ನೀಡಿ ತೆರಳಿದ ಬೆನ್ನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದರು.
ಶನಿವಾರ ರಾತ್ರಿ ಆನೆಗೊಂದಿ ರಸ್ತೆಯಲ್ಲಿರುವ ಶ್ರೀನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಮೊದಲಿಗೆ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ (ಶ್ರೀನಾಥ್ ಅವರ ತಂದೆ) ಮುಖಂಡ ಹೆಚ್.ಜಿ. ರಾಮುಲು ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ರಾಜ್ಯದಲ್ಲಿ ನಡೆದಿರುವ ರಾಜಕೀಯ ವಿದ್ಯಮಾನ ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ ರೆಡ್ಡಿ, ಶ್ರೀನಾಥ್ ಅವರಿಗೆ ಟಿಕೆಟ್ ತಪ್ಪಲು ಪಕ್ಷದ ಪ್ರಮುಖ ನಾಯಕರೊಬ್ಬರ ತಂತ್ರಗಾರಿಕೆ ಕಾರಣ ಎಂಬುದನ್ನು ರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗ್ತಿದೆ.
ಶ್ರೀನಾಥ್ ರೆಡ್ಡಿ ಗೌಪ್ಯ ಚರ್ಚೆ : ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷಿಸಿದ್ದ ಶ್ರೀನಾಥ್ ಅವರು ತೀವ್ರ ಅಸಮಾಧಾನಗೊಂಡಿದ್ದು, ಈಗಾಗಲೇ ತಮ್ಮ ಬೆಂಬಲಿಗರ ಜೊತೆ ಎರಡು ಮೂರು ಸಭೆ ನಡೆಸಿದ್ದಾರೆ. ಇನ್ನೆರಡು ದಿನದಲ್ಲಿ ಮುಂದಿನ ತಮ್ಮ ನಡೆ ಏನು ಎಂಬುವುದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಈ ಮಧ್ಯೆ ಶ್ರೀನಾಥ್ ನಿವಾಸಕ್ಕೆ ರೆಡ್ಡಿ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರನ್ನು ಹೊರತು ಪಡಿಸಿದ್ರೆ ಬೇರೆ ಯಾವುದೇ ನಾಯಕರು, ಬೆಂಬಲಿಗರು ಇರಲಿಲ್ಲ ಎಂದು ತಿಳಿದುಬಂದಿದೆ.
ಕೆಆರ್‌ಪಿಪಿಗೆ ಆಹ್ವಾನ : ಶ್ರೀನಾಥ್ ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರುವಂತೆ ಜನಾರ್ದನ ರೆಡ್ಡಿ ಆಹ್ವಾನ ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀನಾಥ್, ಏಪ್ರಿಲ್ 19 ರವರೆಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಗಡುವು ಇದೆ. ಇದಾದ ಬಳಿಕ ನಾನು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತೇನೆ. ಕೆಆರ್‌ಪಿಪಿಗೆ ಬಾಹ್ಯ ಬೆಂಬಲ ನೀಡುತ್ತೇನೆ. ಅಲ್ಲಿಯವರೆಗೂ ಕಾಯಿರಿ. ಈಗಾಗಲೇ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಶ್ರೀನಾಥ್, ರೆಡ್ಡಿಗೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ : ಕಲಬುರಗಿ ಜಿಲ್ಲೆಗೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ: ಸೇಡಂ ಅಭ್ಯರ್ಥಿಗಳಲ್ಲಿ ತಳಮಳ
ಇದು ಸಿದ್ದರಾಮಯ್ಯ ಕಾಂಗ್ರೆಸ್ : ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಾಥ್, ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಸಿಗದೇ ಹೋದಲ್ಲಿ ಜನಾರ್ದನ ರೆಡ್ಡಿ ಇಲ್ಲಿ ಗೆಲ್ಲಲಿದ್ದಾರೆ ಎಂದು ಪರೋಕ್ಷವಾಗಿ ರೆಡ್ಡಿ ಪರ ಬ್ಯಾಟಿಂಗ್ ಮಾಡಿ ಭವಿಷ್ಯ ನುಡಿದರು. ಈಗಿನ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಈ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿ ಕಾಂಗ್ರೆಸ್ ಪಕ್ಷವಲ್ಲ. ಇದು ಸಿದ್ದರಾಮಯ್ಯ ಕಾಂಗ್ರೆಸ್ ಆಗಿದೆ. ಏನೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಎಐಸಿಸಿ ಅಧ್ಯಕ್ಷರಾದಿಯಾಗಿ ಸಿದ್ದರಾಮಯ್ಯ ಅವರ ಅಣತಿಯಂತೆ ವಹಿಸಬೇಕಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.