ಕೊಪ್ಪಳ: ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮವು ಕೊಪ್ಪಳ ತಾಲೂಕಿನ ಬಸಾಪುರ ಬಳಿ 104 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ ಸಣ್ಣ ಕೈಗಾರಿಕಾ ವಸಾಹತು ಪ್ರದೇಶವನ್ನು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಗಣ್ಣ ಕರಡಿ ಅವರು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಕೈಗಾರಿಕೆಗಳ ಬೆಳವಣಿಗೆಗಳಿಗೆ ಒತ್ತು ನೀಡುತ್ತಿದ್ದಾರೆ. ನಾನು ಕೈಗಾರಿಕಾ ಸಚಿವನಾದ ಮೇಲೆ ಬದಲಾವಣೆ ತರಲು ಸಿಎಂ ಯಡಿಯೂರಪ್ಪ ಅವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದರು.
ಬೆಂಗಳೂರು ಕೇಂದ್ರೀಕೃತ ಕೈಗಾರಿಕೆಗಳನ್ನು ಟೈರ್2, ಟೈರ್3 ಸಿಟಿಗಳಿಗೆ ಶಿಫ್ಟ್ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ಕೈಗಾರಿಕೆಗಳು ಉತ್ತರ ಕರ್ನಾಟಕ ಭಾಗಕ್ಕೆ ಶಿಫ್ಟ್ ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ವಿಸ್ತರಣೆಯಾಗಲು ಹಾಗೂ ಅಭಿವೃದ್ಧಿಯಾಗಲು ಸಾಧ್ಯ. ಈ ಪ್ರಯತ್ನವನ್ನು ಹಂತ ಹಂತವಾಗಿ ಮಾಡುತ್ತಿದ್ದೇವೆ. ಹೊಸ ಕೈಗಾರಿಕೆ ನೀತಿಯಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸಲಾಗುತ್ತದೆ ಎಂದರು.
ನಾನು ಕೈಗಾರಿಕಾ ಸಚಿವನಾದ ಬಳಿಕ ಮೊದಲ ಬಾರಿಗೆ ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟರ್ ಸಮಾವೇಶ ಮಾಡಿದೆ. ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ರೆಸ್ಪಾನ್ಸ್ ಸಿಕ್ಕಿತು. ಬಾಂಬೆ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ದೃಷ್ಠಿಯನ್ನಿಟ್ಟುಕೊಂಡು ನಡೆದ ಈ ಸಮಾವೇಶದಲ್ಲಿ ಸುಮಾರು 72 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು 42 ಜನ ಉದ್ದಿಮೆದಾರರು ಒಪ್ಪಿ ಸಹಿ ಹಾಕಿದ್ದಾರೆ ಎಂದರು.

ಕೊಪ್ಪಳದಲ್ಲಿ ಅಭಿವೃದ್ದಿಪಡಿಸಲಾಗಿರುವ ಈ ಕೈಗಾರಿಕಾ ವಸಾಹತುವಿನಿಂದ ಕೊಪ್ಪಳದಲ್ಲಿ ಕೈಗಾರಿಕಾ ಅಭಿವೃದ್ದಿಗೆ ಚಾಲನೆ ಸಿಕ್ಕಿದೆ ಎಂದು ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ಮಾಸ್ಕ್ ಜೋಕ್:
ಇನ್ಮುಂದೆ ಟೈಲರ್ಗಳು ಪ್ಯಾಂಟ್ ಶರ್ಟ್ಗೆ ಮ್ಯಾಚ್ ಆಗುವ ಹಾಗೆ ಮಾಸ್ಕ್ ಹೊಲಿದು ಕೊಡ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಜೋಕ್ ಮಾಡಿದರು. ಕೊರೊನಾ ಕಾರಣದಿಂದಾಗಿ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ. ಮುಂಬರುವ ದಿನಗಳಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಳ್ಳುವ ಹಾಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಟೈಲರ್ಗಳು ಇನ್ಮುಂದೆ ಪ್ಯಾಂಟ್, ಶರ್ಟ್ ಜೊತೆಗೆ ಮ್ಯಾಚಿಂಗ್ ಮಾಸ್ಕ್ ಹೊಲಿದು ಕೊಡ್ತಾರೆ. ಆ ಪರಸ್ಥಿತಿ ಇನ್ಮುಂದೆ ಬರುತ್ತದೆ. ಇದು ಆರು ತಿಂಗಳಾಗುತ್ತೋ ಅಥವಾ ಒಂದು ವರ್ಷವಾಗುತ್ತೋ ಗೊತ್ತಿಲ್ಲ. ನಾವು ಜಾಗೃತರಾಗಬೇಕು. ನಮ್ಮಷ್ಟಕ್ಕೆ ನಾವೇ ಸೋಂಕು ತಗುಲದಂತೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.