ಗಂಗಾವತಿ: ತಾಲ್ಲೂಕಿನ ವಿರುಪಾಪುರ ಗಡ್ಡೆಯ ಅನಧಿಕೃತ ರೆಸಾರ್ಟ್ಗಳ ತೆರವಿಗೆ ಜಿಲ್ಲಾಡಳಿತ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಕೊಪ್ಪಳದ ಸಹಾಯಕ ಆಯುಕ್ತೆ ಸಿ.ಡಿ. ಗೀತಾ ಹಾಗೂ ಹೊಸಪೇಟೆಯ ಸಹಾಯಕ ಆಯುಕ್ತ ಲೋಕೇಶ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ವಿರುಪಾಪುರ ಗಡ್ಡಿಯಲ್ಲಿ ಇರುವ ಒಟ್ಟು ರೆಸಾರ್ಟ್, ಯಾವೆಲ್ಲಾ ಹೊಟೇಲ್ ಅನಧಿಕೃತ, ಅಧಿಕೃತ ಎಷ್ಟು, ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡಿರುವ ವಾಣಿಜ್ಯ ಕೇಂದ್ರಗಳು ಎಷ್ಟು ಎಂಬುವುದರ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಪ್ರತಿಯೊಂದು ರೆಸಾರ್ಟ್ ಮತ್ತು ಹೊಟೇಲ್ಗೆ ಖುದ್ದು ಭೇಟಿ ನೀಡಿದ ಅಧಿಕಾರಿಗಳು, ಕಟ್ಟಡಗಳ ವಿನ್ಯಾಸ ಹೇಗಿದೆ, ಯಾವೆಲ್ಲಾ ಕೊಠಡಿ, ತೆರವು ಮಾಡಬೇಕು ಎಂಬುದರ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದರು. ಸೋಮವಾರ ಸ್ಥಳಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತ ಲೋಕೇಶ, ಉಪಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಭೇಟಿ ನೀಡಿ ಚರ್ಚಿಸಲಿದ್ದು, ಬಳಿಕ ರೆಸಾರ್ಟ್ಗಳ ನೆಲಸಮಕ್ಕೆ ದಿನಾಂಕ ಮತ್ತು ಸಮಯ ನಿಗದಿ ಮಾಡಲಾಗುವುದು ಎಂದು ತಿಳಿದು ಬಂದಿದೆ.