ಕೊಪ್ಪಳ: ದೇಶದ ಹಿತಕ್ಕಾಗಿ ಜಾರಿಯಾಗುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿವೆ. ಚರ್ಚೆಗೆ ನಾವು ವಿರೋಧಿಗಳಲ್ಲ, ಚರ್ಚೆಯಾದ ನಂತರ ದೇಶದ ಹಿತಕ್ಕಾಗಿ ಇರುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಅವರನ್ನು ದೇಶದಿಂದ ಹೊರಹೋಗಿ ಎನ್ನುತ್ತಿಲ್ಲ. ಮೂರ್ನಾಲ್ಕು ದೇಶದಿಂದ ಬರುವ ವಲಸಿಗರನ್ನು ನಾವು ದೇಶದೊಳಗೆ ಇಟ್ಟುಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ರು.
ನಮ್ಮ ಮನೆಗೆ ಸ್ನೇಹಿತರು ಬಂದ್ರೆ ಎರಡು ದಿನ ಇರಲು ಅವಕಾಶ ಕೊಡ್ತೇವೆ. ಅದೇ ಬೇರೆ ಯಾರೋ ಬಂದ್ರೆ ಮನೆಯಲ್ಲಿರಲು ಅವಕಾಶ ಕೊಡುತ್ತೀವಾ? ಈ ಉದ್ದೇಶದಿಂದ ತಂದಿರುವ ಕಾಯ್ದೆ ಅದು. ಇದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದವರು ಸ್ವಾಗತಿಸಬೇಕು. ಸಮಾಜದಲ್ಲಿ ತಿಳಿ ವಾತಾವರಣ ನಿರ್ಮಾಣ ಮಾಡುವುದನ್ನು ವಿರೋಧ ಪಕ್ಷದವರು ಬಯಸಬೇಕು. ಅದನ್ನು ಬಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದರು.
ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ಇಡೀ ರಾಷ್ಟ್ರ ಶಾಂತಿಯುತವಾಗಿರಲಿ ಎಂದು ಶ್ರೀ ಹುಲಿಗೆಮ್ಮ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.