ಗಂಗಾವತಿ(ಕೊಪ್ಪಳ): ಬಳ್ಳಾರಿ ವಲಯದ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಬಿ.ಎಸ್ ಲೋಕೇಶ್ ಕುಮಾರ್, ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಡಿ. 5ರಂದು ನಡೆಯಲಿರುವ ಹನುಮ ಜಯಂತಿಗೆ ನಾಡಿನ ನಾನಾ ಜಿಲ್ಲೆಗಳಿಂದ ದೊಡ್ಡ ಪ್ರಮಾಣದಲ್ಲಿ ಭಕ್ತರು ಆಗಮಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಪೂರ್ವ ಸಿದ್ಧತೆ ಪರಿಶೀಲನೆ ಮಾಡಲಾಗಿದೆ ಎಂದರು.
ಗಂಗಾವತಿ ತಾಲೂಕಿನಲ್ಲಿ ಒಂದು ಮಹಿಳಾ ಠಾಣೆ, ಎಪಿಎಂಸಿ ಯಾರ್ಡ್ ಮತ್ತು ಆನೆಗೊಂದಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಗಳ ಪ್ರಸ್ತಾವನೆ ಇಲಾಖೆಯ ಮುಂದಿದ್ದು ದಶಕಗಳು ಕಳೆದಿವೆ ಎಂಬುವುದರ ಬಗ್ಗೆ ಪತ್ರಕರ್ತರು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಐಜಿಪಿ, ಸಹಜವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳ ಎಪಿಎಂಸಿಯಲ್ಲಿ ಒಂದು ಪೊಲೀಸ್ ಠಾಣೆ ಇರುತ್ತದೆ. ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆನೆಗೊಂದಿ ಹೊರಠಾಣೆ ಆರಂಭಿಸಲು ಸ್ಥಳೀಯ ಪೊಲೀಸರಿಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಲಾಗಿದೆ. ಅಂಜನಾದ್ರಿಗೆ ಭೇಟಿ ನೀಡಿ ನಾನೇ ಖುದ್ದು ನಾನೇ ವೀಕ್ಷಣೆ ಮಾಡಿದ್ದೇನೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ಒಂದು ಹೊರಠಾಣೆ ಬೇಕಿದೆ. ಹೀಗಾಗಿ ಮೇಲಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಡ್ರಗ್ಸ್, ಡ್ರಿಂಕ್ ಆ್ಯಂಡ್ ಡ್ರೈವ್, ಮಟ್ಕಾದಂತ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯಾರೂ ಭಾಗಿಯಾಗಬಾರದು. ಯುವಕರು ಇಂತಹ ವ್ಯಸನಗಳಿಂದ ದೂರ ಇರಬೇಕು. ಪ್ರಕರಣಗಳಲ್ಲಿ ಸಿಲುಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅಂಜನಾದ್ರಿಯಲ್ಲಿ ಸರಳ ಹನುಮ ಜಯಂತಿ : ಅರ್ಚಕ ವಿದ್ಯಾದಾಸ ಬಾಬಾರಿಂದ ಸಿದ್ಧತೆ