ಗಂಗಾವತಿ: ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹವಾದರೆ ಆ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಪರಿಣಾಮ ಪ್ರವಾಹ ಉಂಟಾಗಿ ವಿದೇಶಿಗರ ನೆಚ್ಚಿನ ತಾಣವಾದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ನಡುಗಡ್ಡೆಯಾಗುತ್ತದೆ. ಇದರಿಂದ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲ, ಶಾಲೆಯ ಮಕ್ಕಳ ಪಾಠ ಪ್ರವಚನಕ್ಕೂ ಸಮಸ್ಯೆಯಾಗುತ್ತದೆ.
ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹ ಬಂದರೆ ಶಾಲೆಯ ಬಹುತೇಕ ಚಟುವಟಿಕೆಗಳು ಸ್ಥಗಿತವಾಗುತ್ತವೆ. ಇಡೀ ವಿರುಪಾಪುರ ಗಡ್ಡೆ ನಡುಗಡ್ಡೆಯಾಗಿ ಬಾಹ್ಯ ಸಂಪರ್ಕ ಕಳೆದುಕೊಳ್ಳುತ್ತದೆ. ಹೀಗಾಗಿ ಆ ಶಾಲೆಯ ಮಕ್ಕಳನ್ನು ಶಿಕ್ಷಕರು ಬಯಲಲ್ಲಿ ಕೂರಿಸಿ ಪಾಠ ಮಾಡುತ್ತಾರೆ.
ಇನ್ನು ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮಕ್ಕಳನ್ನು ಸಮೀಪದ ಆಶ್ರಮವೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಕ್ಕಳ ಪಾಠ, ಪ್ರವಚನಕ್ಕೂ ತೊಂದರೆಯಾಗಿದೆ.