ಕೊಪ್ಪಳ: ನಾನು ಯಾವುದೇ ಮಿಡ್ ನೈಟ್ ಡಿನ್ನರ್ನಲ್ಲಿ ಪಾಲ್ಗೊಂಡಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲವೆಂದು ಜಿಲ್ಲೆಯ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಇತ್ತೀಚಿಗೆ ಶಾಸಕ ಉಮೇಶ್ ಕತ್ತಿ ನಿವಾಸದಲ್ಲಿ ಬಿಜೆಪಿ ಭಿನ್ನಮತೀಯ ಶಾಸಕರು ನಡೆಸಿದ್ದಾರೆ ಎನ್ನಲಾದ ಸಭೆಯಲ್ಲಿ ಪಾಲ್ಗೊಂಡಿದ್ದ ಕುರಿತಂತೆ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಕೇವಲ ಭೋಜನಕೂಟವಷ್ಟೇ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಾನಂತೂ ಅಲ್ಲಿ ಹೋಗಿಲ್ಲ. ಅಭಿವೃದ್ಧಿ ವಿಷಯವಾಗಿ ಏನಾದರೂ ಸಣ್ಣ ಪುಟ್ಟ ಗೊಂದಲಗಳಿದ್ದರೆ ಪಕ್ಷದ ನಾಯಕರು, ರಾಜ್ಯಾಧ್ಯಕ್ಷರು ಬಗೆಹರಿಸುತ್ತಾರೆ ಎಂದರು.
ನಾವು ತ್ಯಾಗ ಮತ್ತು ಸಮಾಧಾನ ಮನೋಭಾವವುಳ್ಳ ಶಾಸಕರು. ಸಿಎಂ ಆಗಿ ಬಿ ಎಸ್ ಯಡಿಯೂರಪ್ಪ ಅವರೇ ಮುಂದುವರೆಯಬೇಕು. ಜಿಲ್ಲೆಯ ವಿಷಯಕ್ಕೆ ಬಂದಾಗ ಸಚಿವ ಸ್ಥಾನ ಕೇಳಿದರೆ ತಪ್ಪಿಲ್ಲ. ನಾವು ಕೇಳುವ ರೀತಿಯಲ್ಲಿ ಕೇಳ್ತೀವಿ. ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಸಿಎಂಗೆ ಕಷ್ಟವಿದೆ. ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಮುನವಳ್ಳಿ ಹೇಳಿದ್ರು.