ಗಂಗಾವತಿ: ಇಲ್ಲಿನ ಇಂದಿರಾ ವೃತ್ತದಲ್ಲಿನ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಖಾಸಗಿ ವ್ಯಕ್ತಿಗಳು ಬೃಹತ್ ವಾಹನಗಳನ್ನು ನಿಲ್ಲಿಸುತ್ತಿರುವುದು ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.
ಮುಖ್ಯರಸ್ತೆಗೆ ಹೊಂದಿಕೊಂಡಂತೆ ರಿಲಾಯನ್ಸ್ ಪೆಟ್ರೋಲ್ ಬಂಕ್ ಮುಂದಿರುವ ಸ್ಥಳದಲ್ಲಿ ನಿತ್ಯ ಹತ್ತಾರು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ರಸ್ತೆ ಇಕ್ಕಟ್ಟಾಗುತ್ತಿದೆ. ಜೆಸಿಬಿ, ಕ್ರೇನ್, ಕಾಂಕ್ರೀಟ್ ಮಿಕ್ಸರ್ನಂತ ದೊಡ್ಡ ಗಾತ್ರದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಈ ವಾಹನಗಳನ್ನು ಗಂಟೆಗೆ ಇಂತಿಷ್ಟು ಎಂದು ಬಾಡಿಗೆ ಆಧಾರದಲ್ಲಿ ಕೊಡುತ್ತಾರೆ. ಮರಳು ಸಂಗ್ರಹಿಸಲು, ಕಟ್ಟಡ ನಿರ್ಮಾಣ, ಭಾರಿ ಗಾತ್ರದ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಿಸಲು ಈ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಇನ್ನು, ಖಾಸಗಿ ಸ್ಥಳದ ಬದಲಿಗೆ ವಾಹನಗಳ ಮಾಲೀಕರು ತಮ್ಮ ಸ್ವಂತ ಸ್ಥಳಕ್ಕೆ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.