ಕೊಪ್ಪಳ: ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಡಿಸೆಂಬರ್ 1ರಂದು ಬೃಹತ್ ಮ್ಯಾರಥಾನ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ್ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹೇಶ ಎಂ.ಜಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, "ಸಮುದಾಯಗಳು ವ್ಯತ್ಯಾಸವನ್ನುಂಟು ಮಾಡುತ್ತದೆ" ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮ್ಯಾರಥಾನ್ ಜಾಥಾ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯ ಹೆಚ್ಐವಿ ಏಡ್ಸ್ ಸೋಂಕಿತರ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹೇಶ್ ಎಂ.ಜಿ ಮಾತನಾಡಿ, ರಾಜ್ಯದಲ್ಲಿ ಹೆಚ್ಐವಿ, ಏಡ್ಸ್ ಸೋಂಕಿತ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆ ಈ ವರ್ಷದಲ್ಲಿ ಐದನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಎ.ಆರ್.ಟಿ ಆರಂಭವಾದಾಗಿನಿಂದ ಈವರೆಗೆ ಒಟ್ಟು 12,141 ಹೆಚ್ಐವಿ ಏಡ್ಸ್ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 3,381 ಹೆಚ್ಐವಿ ಏಡ್ಸ್ ಪೀಡಿತರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಈ ಬಾರಿ ಕುಷ್ಟಗಿ ಭಾಗದಲ್ಲಿ ಜಾಸ್ತಿ ಹೆಚ್ಐವಿ ಏಡ್ಸ್ ಕಂಡುಬಂದಿದೆ. ಹೀಗಾಗಿ ವಿಶ್ವ ಏಡ್ಸ್ ನಿಮೂರ್ಲನಾ ದಿನಾಚರಣೆ ಹಿನ್ನೆಲೆ ಡಿಸೆಂಬರ್ 1ರಂದು ಕುಷ್ಟಗಿಯಲ್ಲಿ ಜಾಗೃತಿ ಮ್ಯಾರಾಥಾನ್ ಜಾಥಾ ಹಮ್ಮಿಕೊಳ್ಳಲಾಗಿದೆ. ಅಸುರಕ್ಷಿತ ಲೈಂಗಿಕತೆ ಹೆಚ್ಐವಿ ಸೋಂಕು ಹರಡಲು ಕಾರಣವಾಗಿದೆ. ಈ ಹಿನ್ನೆಲೆ ಜನರು ಜಾಗೃತರಾಗಬೇಕು. ಕೊಪ್ಪಳ ಜಿಲ್ಲೆಯಲ್ಲಿ 1,616 ಜನ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಲ್ಪಟ್ಟಿದ್ದು, ಈ ಪೈಕಿ 63 ಜನ ಲೈಂಗಿಕ ಕಾರ್ಯಕರ್ತೆಯರಿಗೆ ಎಚ್ಐವಿ ಪಾಸಿಟಿವ್ ಇರೋದು ಗೊತ್ತಾಗಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಹೆಚ್ಐವಿ ಏಡ್ಸ್ ಸೋಂಕು ಹರಡದಂತೆ ತಡೆಯಲು ಕಾಂಡೊಮ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.