ಗಂಗಾವತಿ(ಕೊಪ್ಪಳ): ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 100 ಕೋಟಿ ರೂ. ಘೋಷಿಸಿದ ಬೆನ್ನಲ್ಲೇ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ದೇವಾಲಯಕ್ಕೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ರೋಹಿಣಿ ಸಿಂಧೂರಿ, ಸುಮಾರು ಐನೂರು ಅಡಿ ಎತ್ತರದಲ್ಲಿರುವ ದೇಗುಲವನ್ನು ಮೆಟ್ಟಿಲುಗಳ ಮೂಲಕ ಏರಿದರು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಭಕ್ತಾದಿಗಳಿಗೆ ಅಗತ್ಯ ಇರುವ ಸೌಕರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ್ ಮಾತನಾಡಿ, ವಾಹನ ನಿಲುಗಡೆ, ಸ್ನಾನ, ಶೌಚಾಲಯ ಸೇರಿದಂತೆ ಇತರ ಕಾರ್ಯಕ್ಕೆ 13 ಎಕರೆ ಜಮೀನು ಸ್ವಾಧೀನಕ್ಕೆ ಕಡತ ಸಿದ್ಧ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಷತ್ ಸದಸ್ಯ ಸೂರಜ್ ರೇವಣ್ಣ ಆಯ್ಕೆ ರದ್ದು ಕೋರಿ ಅರ್ಜಿ: ಸಮನ್ಸ್ ಜಾರಿಗೆ ಹೈಕೋರ್ಟ್ ಆದೇಶ