ಕುಷ್ಟಗಿ(ಕೊಪ್ಪಳ): ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿ ಮಾಡಿ, ಒಳ ಮೀಸಲಾತಿ ನೀಡದಿದ್ದಲ್ಲಿ ದೆಹಲಿ ಮಾದರಿ ಹೋರಾಟ ಎದುರಿಸಬೇಕಾದೀತು ಎಂದು ಮಾದಿಗ ಚೈತನ್ಯ ರಥ ಯಾತ್ರೆ ಮುಖ್ಯಸ್ಥ ಹೆಣ್ಣೂರು ಲಕ್ಷ್ಮಿ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ವಿರಾಟ್ ಶಕ್ತಿ ಪ್ರದರ್ಶನ ನಿಮಿತ್ತ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ಇಲಕಲ್ನಿಂದ ಕುಷ್ಟಗಿ ಪಟ್ಟಣ ತಲುಪಿತು. ಈ ವೇಳೆ, ಮಾತನಾಡಿದ ಹೆಣ್ಣೂರು ಲಕ್ಷ್ಮಿ ನಾರಾಯಣ, ಕಳೆದ ಶಿರಾ ಉಪ ಚುನಾವಣೆಯಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಚುನಾವಣೆ ನಂತರ ಅದನ್ನು ಮರೆತಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಈ ವಿಚಾರವಾಗಿ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲ. ಅದೇ ರೀತಿ ಬಿಜೆಪಿಯೂ ಮುಂದುವರಿಸಿದೆ. ಮಾದಿಗ ಸಮುದಾಯ ಶೇ.95ರಷ್ಟು ಶೋಚನೀಯ ಸ್ಥಿತಿಯಲ್ಲಿದೆ. ಹೀಗಾಗಿ, ರಾಜ್ಯಾದ್ಯಂತ ಒಂದು ತಿಂಗಳ ಕಾಲ ಮಾದಿಗ ಚೈತನ್ಯ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 8ರಂದು 10 ಲಕ್ಷ ಜನರು ಬೆಂಗಳೂರಿಗೆ ನುಗ್ಗಲಿದ್ದೇವೆ. ಅಲ್ಲಿಗೆ ಬಂದವರು ವಾಪಸ್ ಊರಿಗೆ ಹೋಗುವುದಿಲ್ಲ. ದೆಹಲಿ ಮಾದರಿ ಹೋರಾಟಕ್ಕೆ ಮುಂದಾಗಲಿದ್ದೇವೆ. ಗುರಿ ಮುಟ್ಟುವವರೆಗೂ ಬಿಡುವುದಿಲ್ಲ ಎಂದರು.