ಗಂಗಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ತಾಣವಾದ ಅಂಜನಾದ್ರಿ ದೇಗುಲದಲ್ಲಿ ಹನುಮ ಜಯಂತಿ ಅಂಗವಾಗಿ ಮಧ್ಯರಾತ್ರಿ ಎರಡು ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿವೆ.
ದೇಗುಲದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳು ಸೇರಿದಂತೆ ಭಕ್ತಾಧಿಗಳು ಅಂಜನಾದ್ರಿ ದೇಗುಲ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿತ್ತು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಕೇವಲ ಅರ್ಚಕರಿಗೆ ಮಾತ್ರ ಅವಕಾಶ ನೀಡಿತ್ತು. ಹೀಗಾಗಿ, ವಿದ್ಯಾದಾಸ ಬಾಬಾ ಮಧ್ಯರಾತ್ರಿಯಿಂದಲೇ ಪೂಜೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಅಯೋಧ್ಯೆಯ ಪ್ರಸಾದ-ವಸ್ತ್ರ ಅಂಜನಾದ್ರಿ ದೇಗುಲದಲ್ಲಿ ಸಮರ್ಪಣೆ
ಗಂಗಾಜಲ ಅಭಿಷೇಕ, 201 ತೆಂಗಿನಕಾಯಿ ನೀರಿನ ಅಭಿಷೇಕ, ಪಂಚಾಮೃತ ಅಭಿಷೇಕ, ಐದು ಅಡಿಯ ಇಡೀ ವಿಗ್ರಹಕ್ಕೆ ತುಪ್ಪ, ಕೇಸರಿ ಲೇಪನ, ಒಂದುಕಾಲು ಸಾವಿರ ಗುಲಾಬಿ ಹೂವಿನ ಅಲಂಕಾರ, ತುಳಸಿ ಅರ್ಚನೆ, ರಾಮ, ಅಂಜನಿ ಹಾಗೂ ಹನುಮ ದೇವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಪವಮಾನ ಹೋಮ, ಹವನ, ಪೂರ್ಣಾಹುತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.