ಕೊಪ್ಪಳ: ಬೇಸಿಗೆ ಬಂತಂದ್ರೆ ಸಾಕು ಬರೀ ನಾವಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳು ಸಹ ನೀರಿಗಾಗಿ ಪರಿತಪಿಸುವ ಸಂದರ್ಭ ಎದುರಾಗುತ್ತದೆ. ಇನ್ನು ಬಿಸಿಲು ನಾಡಿನಲ್ಲಂತೂ ಹನಿ ಹನಿ ನೀರಿಗೂ ಹಾಹಾಕಾರವೇ ಉಂಟಾಗುತ್ತದೆ. ಇಂಥ ವೇಳೆ ಪ್ರಾಣಿ-ಪಕ್ಷಿಗಳು ನೀರಿಗಾಗಿ ಕಿಲೋಮೀಟರಗಳಷ್ಟು ದೂರ ಕ್ರಮಿಸುತ್ತವೆ. ಆದರೆ ಇಲ್ಲೊಬ್ಬ ಪಕ್ಷಿ ಪ್ರೇಮಿ ಜೀವ ಸಂಕುಲಕ್ಕೆ ನೀರಿನ ಅಭಾವ ಕಾಡದಿರಲಿ ಅಂತ ನೀರಿನ ವ್ಯವಸ್ಥೆ ಕಲ್ಪಿಸಿ ಮಾದರಿಯಾಗಿದ್ದಾರೆ.
ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸುಲ್ತಾನ್ ಈ ಕಾರ್ಯ ಮಾಡುತ್ತಿದ್ದಾರೆ. ಹಾಗೆಯೇ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಎಲ್ಲಾ ಮರಗಳಲ್ಲೂ ಹಣತೆ, ಸಣ್ಣ ಮಡಿಕೆಗಳಲ್ಲಿ ನೀರು ಹಾಕಿ ಪ್ರಾಣಿ ಪಕ್ಷಿಗಳ ದಾಹ ತೀರಿಸುತ್ತಾರೆ.
ಈ ಕಾರ್ಯವನ್ನು ಸುಲ್ತಾನ್ ಇಂದು ನಿನ್ನೆಯಿಂದ ಮಾಡಿಕೊಂಡು ಬಂದಿಲ್ಲ. ಬದಲಿಗೆ ಸತತ 11 ವರ್ಷದಿಂದ ಪ್ರಾಣಿಗಳಿಗೆ ನೀರುಣಿಸುವ ಮಹತ್ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಗಿಡಮರಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಹಣತೆಗಳನ್ನು ನೀರಿಗಾಗಿ ಕಟ್ಟಿದ್ದಾರೆ. ಒಂದು ಮರದಲ್ಲಿ ಸುಮಾರು 8 ಟ್ರೇಗಳಿಗೆ ಕಾಳು ಹಾಕಿ ನೇತು ಹಾಕಿದ್ದಾರೆ.
ನಿತ್ಯವೂ ಈ ಮಡಿಕೆಗಳಲ್ಲಿ ನೀರು ತುಂಬಿಸಿ, ಗುಬ್ಬಚ್ಚಿಗಳ ದಾಹ ತಣಿಸುತ್ತಿದ್ದಾರೆ. ಅಲ್ಲದೆ ಅವುಗಳ ಆಹಾರಕ್ಕಾಗಿ ಟ್ರೇಗಳಲ್ಲಿ ಕಾಳು ತುಂಬಿಸಿಡುತ್ತಾರೆ. ನೀರು ಮತ್ತು ಆಹಾರ ಸಿಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಗಿಡ ಮರಗಳಲ್ಲಿ ಸಾವಿರಾರು ಗುಬ್ಬಚ್ಚಿಗಳು ಆಶ್ರಯಪಡೆದುಕೊಂಡು ಆನಂದದಿಂದ ಚಿಲಿಪಿಲಿಗುಡುತ್ತಿವೆ.
ಇಷ್ಟೇ ಅಲ್ಲ, ಕರ್ತವ್ಯಕ್ಕೆ ರಜೆ ಇದ್ದಾಗಲೂ ಸುಲ್ತಾನ್ ಭವನಕ್ಕೆ ಆಗಮಿಸಿ ಕಾಳು-ನೀರು ಹಾಕಿ ಪೋಷಿಸುತ್ತಿದ್ದಾರೆ. ಪಕ್ಷಿಪ್ರೇಮಿ ಸುಲ್ತಾನ್ ಅವರು ಹಕ್ಕಿಗಳ ಪೋಷಣೆಗೆ ತಿಂಗಳಿಗೆ ಏನಿಲ್ಲವೆಂದರೂ 3 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಪಕ್ಷಿಗಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟು ಪೋಷಣೆ ಮಾಡುತ್ತಿರುವ ಸುಲ್ತಾನ್ ಅವರ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಜಿಲ್ಲಾಡಳಿತ ಭವನಕ್ಕೆ ಬರುವ ಸಾರ್ವಜನಿಕರು ಹಾಗೂ ಸಿಬ್ಬಂದಿ.
ಇದನ್ನೂ ಓದಿ: ಓದಿದ್ದು ಎಂಜಿನಿಯರಿಂಗ್.. ಪಡೆದದ್ದು ಜೈಲು ವಾರ್ಡರ್ ಹುದ್ದೆ..