ಕೊಪ್ಪಳ: ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಒಂಟಿತನ ಭಾವ ನೀಗಿಸಲು ಗವಿಸಿದ್ದೇಶ್ವರ ಸ್ವಾಮೀಜಿ ಸೋಂಕಿತರೊಂದಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬುತ್ತಿದ್ದಾರೆ.
ಸೋಂಕಿತರ ಚಿಕಿತ್ಸೆಗಾಗಿ ಶ್ರೀ ಗವಿಮಠ ವೃದ್ಧಾಶ್ರಮದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ. ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಲ್ಲಿ ಒಂಟಿತನದ ಭಾವ ಬಾರದಿರಲಿ ಎಂಬ ಉದ್ದೇಶದಿಂದ ಶ್ರೀಗಳು ಹಾಗೂ ಆಪ್ತ ಸಮಾಲೋಚಕರು ವಿಡಿಯೋ ಕಾಲ್ ಮೂಲಕ ಮಾತನಾಡಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಸ್ವಾಮೀಜಿಗಳೊಂದಿಗೆ ಮಾತನಾಡುವ ಸೋಂಕಿತರು ಧನ್ಯತಾ ಭಾವ ಹಾಗೂ ಶೀಘ್ರ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಗವಿಮಠದ ವೃದ್ಧಾಶ್ರಮದಲ್ಲಿನ 100 ಹಾಸಿಗೆ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ನಿನ್ನೆಯವರೆಗೂ 31 ಜನ ಸೋಂಕಿತರು ದಾಖಲಾಗಿದ್ದರು.