ಕೊಪ್ಪಳ: ಅನ್ನ, ಅಕ್ಷರ, ಆಧ್ಯಾತ್ಮದ ಪರಂಪರೆ ಹುಟ್ಟುಹಾಕಿದ ಗವಿಮಠದ ಲಿಂ.ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳು ಶಿಕ್ಷಣಕ್ಕಾಗಿ ಶ್ರಮಿಸಿದ ಪರಿಯನ್ನು ನೆನೆದು ಈಗಿನ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ಕಣ್ಣಾಲಿಗಳಲ್ಲಿ ನೀರು ಜಿನುಗಿದವು.
ಕೊಪ್ಪಳದ ಗವಿಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ 5,000 ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಅವರು, ತಮ್ಮ ಬಾಲ್ಯವನ್ನು ನೆನೆದು, ಬಡತನದಲ್ಲಿ ಹುಟ್ಟಿದ ನನಗೆ ಅಂದು ಲಿಂ. ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳು ಅನ್ನ, ಆಶ್ರಯ, ವಿದ್ಯೆ ಕೊಟ್ಟು ಸಲಹಿದರು ಎಂದರು.
ಇದನ್ನೂ ಓದಿ: ಮಗುವಿನೊಂದಿಗೆ ಮಗುವಾದ ಗವಿಶ್ರೀ.. ಮಹಾರಥೋತ್ಸವ ಹಿನ್ನೆಲೆ ತಾವೇ ರಥ ಸ್ವಚ್ಛ ಮಾಡಿದ ಗುರುಗಳು!
ನನ್ನಂತೆ ನಾಡಿನಲ್ಲಿ ಅನೇಕ ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ವಿದ್ಯೆ, ಅನ್ನ ನೀಡುವುದೇ ನಮ್ಮ ಧ್ಯೇಯ. ಅದೇ ಪೂಜೆ ಎಂದು ಗುರುಗಳು ಹೇಳಿಹೋಗಿದ್ದಾರೆ. ಕೊಪ್ಪಳದಲ್ಲಿ ಮೊದಲು 160 ವಿದ್ಯಾರ್ಥಿಗಳಿಂದ ಆರಂಭವಾದ ವಸತಿ, ಪ್ರಸಾದ ನಿಲಯ ಇಂದು 5,000 ಮಕ್ಕಳವರೆಗೆ ಬೆಳೆದು ನಿಂತಿದೆ. ನನ್ನ ಜೋಳಿಗೆಗೆ ಆ ಗವಿಸಿದ್ದ ಇನ್ನಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.