ಗಂಗಾವತಿ: ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಬಡ ಫಲಾನುಭವಿಗಳಿಗೆ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದಲ್ಲಿ ಒಟ್ಟು ಏಳು ಕಡೆ ದಾಳಿ ಮಾಡಿದೆ.
ಪ್ರಭಾವಿಗಳಿಗೆ ಸೇರಿದ್ದ ರೈಸ್ ಮಿಲ್, ಗೋದಾಮು, ಟ್ರೆಡಿಂಗ್ ಕಂಪನಿ ಸೇರದಂತೆ ಇನ್ನಿತರ ಕಡೆಗಳಲ್ಲಿ ದಾಳಿ ಮಾಡಿದ ಅಧಿಕಾರಿಗಳು, ಮೂರು ಲಾರಿ ಸೇರಿದಂತೆ ಒಟ್ಟು ನೂರಾರು ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಶರಣಬಸವೇಶ್ವರ ಕ್ಯಾಂಪ್, ಕಿಲ್ಲಾ ಏರಿಯಾದಲ್ಲಿ ಮನೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಮುಂದುವರೆದಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಓದಿ-ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಇಲ್ಲ: ಬಿಎಸ್ವೈ ಸ್ಪಷ್ಟನೆ
ಮಂಜುನಾಥ ರೈಸ್ ಮಿಲ್, ಗೌರಿಶಂಕರ್ ರೈಸ್ ಮಿಲ್ ಸೇರಿದಂತೆ ಖಾಸಗಿ ಗೋದಾಮು, ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ನಾಲ್ಕು ಲೋಡ್ ಅಕ್ಕಿ ಸಿಕ್ಕಿದೆ. ನಾಲ್ಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಒಂದು ಲಾರಿಯಲ್ಲಿ ಅಂದಾಜು 20 ಟನ್ ಅಕ್ಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ನೇತೃತ್ವದ ದಾಳಿಯಲ್ಲಿ ಎಸ್ಪಿ ಟಿ.ಶ್ರೀಧರ, ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ, ಆಹಾರ ಇಲಾಖೆಯ ಉಪ ನಿರ್ದೇಶಕ ಶಾಂತನಗೌಡ ಸೇರಿದಂತೆ ಹಲವು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.