ಗಂಗಾವತಿ (ಕೊಪ್ಪಳ): ಜಲಾಶಯದ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಸುತ್ತಿರುವ ಪರಿಣಾಮ ತಾಲೂಕಿನ ಆನೆಗೊಂದಿ ಹಾಗೂ ಸಣಾಪುರ ಗ್ರಾಮಗಳ ಐತಿಹಾಸಿಕ ತಾಣಗಳು ಜಲಾವೃತವಾಗುತ್ತಿವೆ. ಕೃಷ್ಣ ದೇವರಾಯನ ಸಮಾಧಿ ಹಾಗೂ ಕಲ್ಲಿನ ಸೇತುವೆ ಮಳೆನೀರಿಂದ ಮುಳುಗಿದೆ.
ಸಣಾಪುರ ಸಮೀಪ ವಿಜಯನಗರ ಅರಸರ ಕಾಲದಲ್ಲಿ ನೀರಾವರಿ ಹಾಗೂ ಕೃಷಿ ಉದ್ದೇಶಕ್ಕೆ ನಿರ್ಮಿಸಲಾಗಿರುವ ಕಲ್ಲಿನ ಸೇತುವೆಗೆ ಸುಮಾರು 600 ವರ್ಷಗಳ ಇತಿಹಾಸವಿದೆ. ತುಂಗಭದ್ರಾ ನದಿಯ ಎರಡು ದಡಗಳನ್ನು ಸಂಪರ್ಕಿಸುವ ಉದ್ದೇಶಕ್ಕೆ ಅರಸರು ಈ ಕಲ್ಲಿನ ಸೇತುವೆ ನಿರ್ಮಿಸಿದ್ದರು ಎನ್ನಲಾಗಿದೆ.
ಶ್ರೀಕೃಷ್ಣ ದೇವರಾಯನ ಸಮಾಧಿ ಎಂದು ಹೇಳಲಾಗುತ್ತಿರುವ ಆನೆಗೊಂದಿ ಗ್ರಾಮದ ಹೊರ ವಲಯದಲ್ಲಿರುವ 64 ಕಾಲಿನ ಮಂಟಪ ಇದೀಗ ತುಂಗಭದ್ರಾ ನದಿಯಲ್ಲಿ ಸಂಪೂರ್ಣ ಜಲಸಮಾಧಿಯಾಗಿದೆ.
ನವೃಂದಾವನ ಗಡ್ಡೆಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಈ ಮಂಟಪ, ನದಿಗೆ ಹೆಚ್ಚಿನ ನೀರು ಹರಿಸಿದಾಗಲೊಮ್ಮೆ ಜಲಸಮಾಧಿಯಾಗುತ್ತಿದೆ. ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮತ್ತೆ ಕಾಣಿಸಿಕೊಳ್ಳುತ್ತದೆ. ಜಲಾಶಯದ ಹೆಚ್ಚುವರಿ ನೀರು ಈಗ ನದಿಗೆ ಹರಿಸಿದ್ದರಿಂದ ಮಂಟಪ ನೀರಿನಲ್ಲಿ ಮುಳುಗಿದೆ.
ಶ್ರೀಕೃಷ್ಣ ದೇವರಾಯ ಸಾವನ್ನಪ್ಪಿದ ಬಳಿಕ ಆತನ ಇಚ್ಛೆಯಂತೆ ನದಿಯ ದಡದಲ್ಲಿ ಸಮಾಧಿ ಮಾಡಲಾಗಿದೆ. ಅರಸ 64 ಲಲಿತ ಕಲೆಗಳಲ್ಲಿ ಪ್ರವೀಣನಾಗಿದ್ದರಿಂದ ಆತನ ಸ್ಮರಣಾರ್ಥ ಮಂಟಪದಲ್ಲಿ 64 ಕಾಲುಗಳನ್ನು ನಿಲ್ಲಿಸಲಾಗಿದೆ.
ಒಂದೊಂದು ಲಲಿತ ಕಲೆಗೂ ಒಂದೊಂದು ಕಾಲಿನಂತೆ ಮಂಟಪದ ಆಧಾರ ಸ್ತಂಭವಾಗ ಕಲ್ಲುಗಳನ್ನು ನಿಲ್ಲಿಸಲಾಗಿದೆ ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಇದು ಶ್ರೀಕೃಷ್ಣ ದೇವರಾಯನ ಸಮಾಧಿ ಎಂದು ಈಗಲೂ ಈ ಭಾಗದ ಜನ ನಂಬುತ್ತಾರೆ.