ಗಂಗಾವತಿ: ಸರ್ಕಾರಿ ಶಾಲೆಯ ಮೇಲ್ಚಾವಣಿಗೆ ತೆರಳಲು ಸಂಪರ್ಕಕ್ಕೆಂದು ಹಾಕಲಾಗಿದ್ದ ಮೆಟ್ಟಿಲು ಕುಸಿದು ನಾಲ್ಕು ಮಕ್ಕಳಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಕ್ಕುಂಪಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅದೃಷ್ಟವಶಾತ್ ಘಟನೆಯಿಂದ ಪ್ರಾಣ ಹಾನಿಯಾಗಿಲ್ಲ. ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಕ್ಕಳನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕಟ್ಟಡದಲ್ಲಿ ನೀರು ನಿಂತ ಕಾರಣ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಲೆಯಪ್ಪ ಯಾದವ್, ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಸೂಕ್ತ ಕೊಠಡಿಗಳಿಲ್ಲ. ಇರುವ ಆರು ಕೊಠಡಿಗಳ ಪೈಕಿ ನಾಲ್ಕು ಸೋರುತ್ತಿವೆ. ಕೂಡಲೇ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ, ಚಾಲಕ ಸಾವು
ಹಿಂದಿನ ಪ್ರಕರಣ: ಮೈಸೂರಲ್ಲಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳಿಗೆ ಗಾಯ: ನವೆಂಬರ್ 8 ರಂದು ಮೈಸೂರಿನ ಹೆಚ್ಡಿ ಕೋಟೆ ತಾಲೂಕಿನ ತೆಲುಗುಮಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಧ್ಯಾಹ್ನ ಊಟ ಮುಗಿಸಿ ನಿದ್ರಿಸಿದ ಸಂದರ್ಭದಲ್ಲಿ ದಿಢೀರ್ ಅಂಗನವಾಡಿ ಕಟ್ಟಡದ ಸೀಲಿಂಗ್ ಕಳಚಿ ಬಿದ್ದಿತ್ತು. ಪರಿಣಾಮ 2 ಮಕ್ಕಳಿಗೆ ಗಾಯಗಳಾಗಿತ್ತು. ತಕ್ಷಣವೇ ಸರಗೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಆ ದಿನದಂದು ಅಂಗನವಾಡಿಯಲ್ಲಿ ಕೇವಲ 6 ಮಂದಿ ಮಕ್ಕಳು ಇದ್ದುದರಿಂದ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ.