ಕೊಪ್ಪಳ : ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ಅವರ ಕಷ್ಟ ಕೇಳುತ್ತಿಲ್ಲ. ಚುನಾವಣೆಯಲ್ಲಿ ಬ್ಯುಸಿಯಾಗಿರುವ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಟೀಕಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪ್ರವಾಹದಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ಜನರು ಮತ್ತೆ ಈಗ ಪ್ರವಾಹದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರು ಸತ್ತುಹೋದ ಮೇಲೆ ವೈಮಾನಿಕ ಸಮೀಕ್ಷೆಗೆ ನಡೆಸುತ್ತಾರಾ? ಬಿಜೆಪಿಯವರಿಗೆ ಜನರು ಪ್ರವಾಹದಲ್ಲಿ ಕೊಚ್ಚಿಹೋದರೇನು? ಸತ್ತುಹೋದರೇನು? ಅವರಿಗೆ ಚುನಾವಣೆಯೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೃಷಿ ಸಚಿವರು ಸೂಟ್ಕೇಸ್ ಸಚಿವರಾಗಿದ್ದಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಈಗ ಅವರದೆ ಇಲಾಖೆಯ ಸಿಬ್ಬಂದಿ ಕೃಷಿ ಸಚಿವರ ಬಗ್ಗೆ ಸಿಎಂಗೆ ದೂರು ನೀಡಿದ್ದಾರೆ. ಬರಿ ಕೃಷಿ ಸಚಿವರು ಅಲ್ಲ. ನಮ್ಮ ಜಿಲ್ಲೆಯಲ್ಲಿ ಅವ್ಯವಹಾರ ಮಾಡುವ ಅಧಿಕಾರಿಗಳಿಗೆ ರಕ್ಷಣೆ ಇದೆ. ಆದರೆ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಸಸ್ಪೆಂಡ್ ಶಿಕ್ಷೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಹರಿಕತೆ, ಪುರಾಣ ಹೇಳಲು ಬಿಜೆಪಿಯವರು ನಿಸ್ಸೀಮರು. ಸಂಕಷ್ಟದಲ್ಲಿರುವ ಜನರ ಕಷ್ಟವನ್ನು ಸರ್ಕಾರ ಆಲಿಸಲಿ. ಕಂದಾಯ ಸಚಿವರು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದಾರೆ. ಪ್ರಧಾನಮಂತ್ರಿಗಳ ಬಳಿ ಹೋಗಿ ಪರಿಹಾರ ಕೇಳಲು ಬಿಜೆಪಿಯ ಸಂಸದರಿಗೆ ಧೈರ್ಯವಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಖಾಲಿ ಡಬ್ಬಿ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಕೋವಿಡ್ 19 ತಡೆಗಟ್ಟಲು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆ. ರೈತರು ಸಹ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಜಾರಿ ಮಾಡಿರುವ ಭೂಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನವಾಗಲಿದೆ ಎಂದು ತಂಗಡಗಿ ಹೇಳಿದರು.