ಗಂಗಾವತಿ : ರಾಮ ರಾಜ್ಯದ ಕನಸು ಕಂಡಿದ್ದ ಗಾಂಧಿನಾಡಿನಲ್ಲಿ ಪೆಟ್ರೋಲ್ ಬೆಲೆ 91, 92, 93 ರೂಪಾಯಿಗೆ ಏರಿಕೆಯಾಗುತ್ತಿದೆ. ವಿಲನ್ ಎಂದು ಕರೆಸಿಕೊಂಡ ರಾವಣನ ನಾಡಿನಲ್ಲಿ ಪೆಟ್ರೋಲ್ ₹49. ವಾಸ್ತವವಾಗಿ ರಾವಣನ ನಾಡೇ ರಾಮನ ನಾಡಾಗಬೇಕಿತ್ತು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಟೀಕಿಸಿದರು.
ಓದಿ: ಸರ್ಕಾರದಿಂದ ಮೇಜರ್ ಸರ್ಜರಿ : 42 ಐಎಎಸ್ ಅಧಿಕಾರಿಗಳ ವರ್ಗಾವಣೆ
ಕಾಂಗ್ರೆಸ್ ಪಕ್ಷದಿಂದ ನಗರದ ಕೃಷ್ಣ ದೇವರಾಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿ, ಸೀತೆಯ ನಾಡಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ₹53. ಆದರೆ, ರಾಮನ ನಾಡು ಎಂದು ಕರೆಯಿಸಿಕೊಳ್ಳುವ ಮೋದಿ ನಾಡಿನಲ್ಲಿ ಎಷ್ಟಿದೆ? ಎಂದು ಪ್ರಶ್ನಿಸಿದರು.
ಕೋಮು ದಳ್ಳುರಿ ಮೂಲಕ ಅಧಿಕಾರಕ್ಕೆ ಬರುವುದು ಬಿಜೆಪಿಗೆ ವಾಡಿಕೆಯಾಗಿದೆ. ಗಲಭೆಗಳನ್ನು ಸೃಷ್ಟಿ ಮಾಡುವುದು ಬಿಜೆಪಿಗೆ ಕರಗತವಾಗಿದೆ. ಅನಗತ್ಯ ಜನರ ಮಧ್ಯೆ ವಿವಾದಗಳನ್ನು ಸೃಷ್ಟಿಸುತ್ತಾರೆ.
ಕೊರೊನಾ ಮುಂಚೆ ದೇಶದಲ್ಲಿ ಎನ್ಆರ್ಸಿ, ಸಿಎಎ ಎಂಬ ಕಾಯ್ದೆಗಳ ಮೂಲಕ ದೇಶದ ಜನರನ್ನು ಪಾಕಿಸ್ತಾನ, ಬಾಂಗ್ಲಾ ಎಂಬ ಬೇರೆ ದೇಶಗಳ ಹೆಸರು ತೆಗೆದುಕೊಂಡು, ನಮ್ಮ ಜನರನ್ನು ಪ್ರಚೋದನೆ ನೀಡಿ ಓಡಿಸಲು ಯತ್ನಿಸಿದರು.
ಕೇಂದ್ರದ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ದೇವರ ಕೊಡುಗೆ ಎಂಬಂತೆ ದೇಶಕ್ಕೆ ಕೊರೊನಾ ಕಾಲಿಟ್ಟಿತ್ತು. ಕೊರೊನಾ ಕಾಲಿಟ್ಟ ಘಳಿಗೆಯಿಂದ ಎನ್ಆರ್ಸಿ, ಸಿಎಎ ಎಲ್ಲವೂ ಹೊರಟು ಹೋಯಿತು. ಆ ಬಳಿಕ ಬೆಲೆ ಏರಿಕೆಯ ಬಿಸಿ ಜನರಿಗೆ ಕೇಂದ್ರ ಸರ್ಕಾರ ನೀಡಿದೆ.
ಕೇಂದ್ರ ಜಾರಿಗೆ ಯತ್ನಿಸುತ್ತಿರುವ ಕೃಷಿ ಮಸೂದೆಯಿಂದ ಕೇವಲ ಅದಾನಿ, ಅಂಬಾನಿಗೆ ಲಾಭವಿದೆ. ರೈತರಿಗೆ ಭತ್ತ ಖರೀದಿಸುವ ಇವರು ಗೋದಾಮಿನಲ್ಲಿ ಸ್ಟಾಕ್ ಇಡುತ್ತಾರೆ. ದುಪ್ಪಟ್ಟು ಬೆಲೆಗೆ ಮಾರುಟ್ಟೆಗೆ ತರುತ್ತಾರೆ. ಬೇಕಿದ್ದವರು ಕೊಳ್ಳಬಹುದು, ಇಲ್ಲದವರು ಉಪವಾಸವಿದ್ದು ಸಾಯಬಹುದು ಎಂಬ ನೀತಿ ಸರ್ಕಾರದ್ದಾಗಿದೆ ಎಂದು ಕುಟುಕಿದರು.