ಕುಷ್ಟಗಿ (ಕೊಪ್ಪಳ): ಹಿಂಗಾರು ಹಂಗಾಮಿನ ಕಡಲೆ ಉತ್ತಮ ಇಳುವರಿಯಿಂದ ಖುಷಿಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಶಾಕ್ ನೀಡಿದೆ., ಇದೀಗ ರೈತರು ಕೇಂದ್ರ ಸರ್ಕಾರ ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಮಾಹಿತಿ ಪ್ರಕಾರ 11,500 ಹೆಕ್ಟೇರ್ ಒಟ್ಟು ಗುರಿ ಹೊಂದಿದ್ದು, 12,040 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ಜನವರಿ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಇಳುವರಿ ಸ್ವಲ್ಪ ಪ್ರಮಾಣದಲ್ಲಿ ಹೊಡೆತ ನೀಡಿತಾದ್ರೂ ನಂತರ ಬಿರು ಬಿಸಿಲು ಕಡಲೆ, ಜೋಳದ ಬೆಳೆಗೆ ಚೇತರಿಕೆ ಕಂಡಿತ್ತು. ಇದೀಗ ಎಲ್ಲೆಡೆ ಕಡಲೆ ಕಟಾವು, ಒಕ್ಕಣೆಯಂತ್ರದ ಮೂಲಕ ರಾಶಿ ಕಾರ್ಯ ಭರದಿಂದ ಸಾಗಿದೆ.
ಮೆಕ್ಕೆಜೋಳ, ಸಜ್ಜೆ ಹೊರತುಪಡಿಸಿ ಸರ್ಕಾರ ಶೇಂಗಾ, ಹತ್ತಿ, ಜೋಳ, ಭತ್ತ, ತೊಗರಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿದೆ. ಈ ಬಾರಿ ಹಿಂಗಾರು ಹಂಗಾಮಿನ ಸಕಾಲಿಕ ಮಳೆಯಿಂದ ಉತ್ತಮ ಬೆಳೆ ಬಂದಿದೆ.
ಸದ್ಯ ಕಡಲೆ ಬೆಳೆ ಕಟಾವು, ರಾಶಿ ನಡೆದಿದೆ. ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ವಾರದ ಹಿಂದೆ ಆರಂಭಿಕ ಬೆಲೆ ಪ್ರತಿ ಕ್ವಿಂಟಾಲ್‌ಗೆ 4,800 ರೂ. ಇತ್ತು. ಇಳುವರಿ ಹೆಚ್ಚಿದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಆವಕ ಜಾಸ್ತಿಯಾಗುತ್ತಿದ್ದಂತೆ ಪ್ರತಿ ಕ್ವಿಂಟಲ್‌ಗೆ ಸದ್ಯ 4,200 ರೂ.ಗೆ ಇಳಿಕೆ ಮಾಡಲಾಗಿದೆ.
ಇನ್ನಷ್ಟು ಕಡಲೆ ಉತ್ಪನ್ನ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿದ್ದು, ದರ ಕುಸಿತದ ಆತಂಕ ರೈತರನ್ನ ಕಾಡ್ತಿದೆ. ಸದ್ಯ ಬಹುತೇಕ ರೈತರು ಕೇಂದ್ರ ಸರ್ಕರದ ಬೆಂಬಲ ಬೆಲೆಯ ಜಪದಲ್ಲಿದ್ದಾರೆ.
ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ 4,800 ರೂ. ಬೆಂಬಲ ಬೆಲೆ ಸಿಕ್ಕಿತ್ತು. ಈ ಬಾರಿಯೂ ಕಡಲೆ ಉತ್ಪನ್ನ ಗುಣಮಟ್ಟದಿಂದ ಕೂಡಿದ್ದು, ಅದಕ್ಕೆ ತಕ್ಕಂತೆ ದರ ಇಲ್ಲ ಅನ್ನೋದು ರೈತರ ಅಳಲಾಗಿದೆ. ಈ ಸಂಧರ್ಭದಲ್ಲಿ ಕಡಲೆಗೆ ಕೂಡಲೇ ಬೆಂಬಲ ಬೆಲೆ, ಆನ್ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವಾರ ಕಡಲೆ ಪ್ರತಿ ಕ್ವಿಂಟಲ್ ಗೆ 4310 ರೂ. ಇತ್ತು. ಇದೀಗ 4,200 ರೂ.ಗೆ ಇಳಿದಿದೆ. ಫೆ.3ರವರೆಗೆ 1,125 ಕ್ವಿಂಟಲ್ ಕಡಲೆ ಆವಕವಾಗಿದೆ. ಮುಂದಿನ ವಾರ ಕಡಲೆ ಆವಕ ಜಾಸ್ತಿಯಾಗಲಿದೆ.
ಕಳೆದ ಜ.28ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆದಿದ್ದು, ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಸಭೆಯಲ್ಲಿ ಸರ್ಕಾರಕ್ಕೆ ಈಗಾಗಲೇ ಟಾಸ್ಕ್ಫೋರ್ಸ್ ಸಭಾ ನಡಾವಳಿಯ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ. ನೀಲಪ್ಪ ಶೆಟ್ಟಿ ಹೇಳಿದರು.
ಓದಿ : ಕಲರಿ ಪಯಟ್ಟು: ಯುದ್ಧ ಕಲೆಯಲ್ಲಿ ಸಾಹಸಗಾಥೆ ಬರೆದ ಮೀನಾಕ್ಷಿ ಅಮ್ಮ..!
ರೈತರು ತಮ್ಮ ಉತ್ಪನ್ನ ಮಾರಾಟದ ಬಳಿಕ ಬೆಂಬಲ ಬೆಲೆ ಆರಂಭಿಸಿದರೆ ರೈತರಿಗೆ ಪ್ರಯೋಜನೆ ಆಗುವುದಿಲ್ಲ. ದಲ್ಲಾಳಿಗಳಿಗೆ ಲಾಭ ಸೇರುತ್ತದೆ. ಪ್ರತಿ ಕ್ವಿಂಟಲ್ ಗೆ 5 ಸಾವಿರ ರೂ. ಗಿಂತ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು.
ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕಡಲೆ ಮಾರಾಟ ಮಾಡದೇ, ಒಳ್ಳೆಯ ಬೆಲೆ ಬಂದಾಗಲೇ ಮಾರಾಟ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಮೂಲಿಮನಿ ಮನವಿ ಮಾಡಿದ್ದಾರೆ.