ಗಂಗಾವತಿ: ರೈತರ ಹೊಲ-ಮನೆ, ಜಮೀನು, ತೋಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಾನಾ ಇಲಾಖೆಗಳಿಗೆ ಅಲೆದಾಡಿ ಕೆಲಸ ಮಾಡಿಕೊಡುತ್ತಿದ್ದ ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಲಾಲ್ಸಾಬ್ ಎಂದು ಗುರುತಿಸಲಾಗಿದೆ. ಗ್ರಾಮದ ಹೊರ ವಲಯದಲ್ಲಿನ ಮರವೊಂದರಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಲಾಲ್ಸಾಬ್ ಮೃತದೇಹ ಪತ್ತೆಯಾಗಿದೆ. ಲಾಲ್ಸಾಬ್ ಸಾವಿನ ಪ್ರಕರಣ ಇದೀಗ ನಾನಾ ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ಲಾಲ್ಸಾಬ್ ಕಳೆದ ಒಂದೂವರೆ ದಶಕದಿಂದ ರೈತರು, ವಿಧವೆಯರು, ವಿಕಲರು ಹಾಗೂ ವೃದ್ಧರಿಗೆ ಸರ್ಕಾರದ ನಾನಾ ಯೋಜನೆಗಳನ್ನು ದೊರಕಿಸಿಕೊಡುವಲ್ಲಿ ಕಚೇರಿಗಳಿಗೆ ಓಡಾಡುತ್ತಿದ್ದರು.
ಮಧ್ಯವರ್ತಿಯಾಗಿದ್ದ ಈ ವ್ಯಕ್ತಿಯಿಂದ ಗ್ರಾಮದ ನೂರಾರು ಜನ ಸರ್ಕಾರದ ನಾನಾ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಏಕಾಏಕಿ ಈ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.