ಕುಷ್ಟಗಿ (ಕೊಪ್ಪಳ): ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಹಾಗೂ ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಇಂದು ಉಪ ತಹಶೀಲ್ದಾರ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಮೂಲಿಮನಿ ಮಾತನಾಡಿ, ಸರ್ಕಾರವು ಎಪಿಎಂಸಿ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಅನುಷ್ಟಾನಕ್ಕೆ ತಂದು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕಾರ್ಪೋರೇಟ್ಗಳಿಗೆ ತೆರೆದಿಟ್ಟಿದೆ. ಈ ಕ್ರಮವು ಜನತಂತ್ರ ವಿರೋಧಿಯಾಗಿದೆ ಎಂದರು.
ಅಲ್ಲದೆ ಸರ್ಕಾರದ ಈ ಕ್ರಮವು ರೈತ ವಿರೋಧಿಯಾಗಿದ್ದು, ಮುಂಬರುವ ದಿನಗಳಲ್ಲಿ ಬಂಡವಾಳಶಾಹಿ ಮಾಲೀಕರು, ಬಹು ರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಮನೆತನಗಳು ರೈತರ ಆಸ್ತಿಯನ್ನು ಕಬಳಿಸಲು ಈ ತಿದ್ದುಪಡಿಯು ಅವಕಾಶ ನೀಡಿ ರೈತರನ್ನು ದಿವಾಳಿ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಅವರನ್ನು ಆಸ್ತಿ ಪಾಸ್ತಿ ಕಳೆದುಕೊಂಡು ಭೂ ಹೀನ ಕಾರ್ಮಿಕರಾಗಿಸಲಿದೆ ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಆರ್. ಕೆ. ದೇಸಾಯಿ, ರಾಜಾ ನಾಯಕ, ಶರಣಯ್ಯ ಮುಳ್ಳೂರುಮಠ, ಹಸನುದ್ದೀನ್ ಅಲಂಬರ್ದಾರ, ದೇವಪ್ಪ ಕಂಬಳಿ ಮತ್ತಿತತರು ಇದ್ದರು.